ಪುತ್ತೂರು, ಏ 15 (MSP): ಮಂಗಳೂರಿನಲ್ಲಿ ಏ.13 ರ ಶನಿವಾರ ಮೋದಿ ಕಾರ್ಯಕ್ರಮ ಮುಗಿದ ಬಳಿಕ ಬಿಜೆಪಿ ಶಾಸಕರಿರುವ 7 ಕ್ಷೇತ್ರಗಳಲ್ಲಿ ಎಲ್ಲಿಯೂ ಕೂಡಾ ಗದ್ದಲ ಗಲಾಟೆ ಗೂಂಡಾಗಿರಿ ನಡೆದಿಲ್ಲ. ಆದರೆ ಕಾಂಗ್ರೆಸ್ ಶಾಸಕರಿರುವ, ಉಸ್ತುವಾರಿ ಸಚಿವರ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾತ್ರ ಗೂಂಡಾಗಿರಿ ನಡೆದಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ಮಠಂದೂರು ದೂರಿದ್ದಾರೆ.
ಪುತ್ತೂರಿನಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ತೆರಳುತ್ತಿದ್ದ ಬಸ್ಗಳಿಗೆ ಕಲ್ಲೆಸೆದು ಗೂಂಡಾಗಿರಿ ನಡೆಸಿ ಮಹಿಳೆಯರ ಮೇಲೆ ಹಲ್ಲೆ ನಡೆಸಲಾಗಿದೆ. ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ಮಾತ್ರ ಈ ಇಂತಹ ಘಟನೆ ಸಂಭವಿಸಿದ್ದು. ಉಳ್ಳಾಲದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮಹಿಳೆಯರ ಮೇಲೆ ಬಸ್ನೊಳಕ್ಕೆ ನುಗ್ಗಿ ಹಲ್ಲೆ ನಡೆಸಿದವರು ಯಾರು? ಈ ಬಗ್ಗೆ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮತ್ತು ಮೈತ್ರಿ ಕೂಟದ ಅಭ್ಯರ್ಥಿ ಮಿಥುನ್ ರೈ ತಕ್ಷಣ ಉತ್ತರಿಸಬೇಕು ಎಂದರು.
ಪರಿಸ್ಥಿತಿ ಈಗಾಗಲೇ ಹೀಗಿದೆ, ಅಪ್ಪಿ ತಪ್ಪಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟ ಗೆಲುವು ಸಾಧಿಸಿದರೆ ಜಿಲ್ಲೆಯಲ್ಲಿ ಯಾವ ಪರಿಸ್ಥಿತಿ ಬರಬಹುದು ಎಂಬ ವಿಚಾರ ಮತದಾರರಿಗೆ ಈಗಾಗಲೇ ಮನದಟ್ಟಾಗಿದೆ. ತಕ್ಷಣ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.