ಮಂಗಳೂರು, ಅ 29 (DaijiworldNews/HR): ಅಕ್ಟೋಬರ್ 18ರಂದು ಕುದ್ರೋಳಿ ದೇವಳದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವಕ್ಕೆ ಭೇಟಿ ನೀಡಿ ಮನೆಗೆ ಹೋಗಲು ಬಸ್ ಹತ್ತಲು ಲೇಡಿಹಿಲ್ ನಾರಾಯಣಗುರು ಸರ್ಕಲ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಾರು ಡಿಕ್ಕಿಯಾಗಿ ಮೃತಪಟ್ಟ ಸುರತ್ಕಲ್ ಕಾನ, ಬಾಳ ನಿವಾಸಿ ರೂಪಶ್ರೀ ಕುಲಾಲ್ ಮನೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ, ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್. ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿ, ಕುದ್ರೋಳಿ ಗುರುಬೆಳದಿಂಗಳು ಫೌಂಡೇಶನ್ನಿಂದ ಸಹಾಯಹಸ್ತ ನೀಡಲಾಯಿತು.
ಅಕ್ಟೋಬರ್ 18ರಂದು ಕುದ್ರೋಳಿ ದೇವಳದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವಕ್ಕೆ ಭೇಟಿ ನೀಡಿ ಮನೆಗೆ ಹೋಗಲು ಬಸ್ ಹತ್ತಲು ಲೇಡಿಹಿಲ್ ನಾರಾಯಣಗುರು ಸರ್ಕಲ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಅತಿ ವೇಗವಾಗಿ ಬಂದ ಕಾರು ಡಿಕ್ಕಿಯಾಗಿ ಸುರತ್ಕಲ್ ಕಾನ, ಬಾಳ ನಿವಾಸಿ ರೂಪಶೀ ಕುಲಾಲ್ (23) ಮೃತಪಟ್ಟಿದ್ದರು.
ಪದ್ಮರಾಜ್ ಆ ದಿನ ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮೃತರ ಕುಟುಂಬಸ್ಥರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಇದೀಗ ಅವರು ಆಸ್ಪತ್ರೆಯಿಂದ ಡಿಸ್ಚಾಜ್ ಆದ ತಕ್ಷಣ ರೂಪಶ್ರೀ ಕುಲಾಲ್ ತಂದೆ ತಾಯಿ ಅಣ್ಣ ತಂಗಿಯನ್ನು ಸಂತೈಸಿ ತಮ್ಮ ನೇತೃತ್ವದ ಗುರುಬೆಳದಿಂಗಳು ಸಂಸ್ಥೆಯಿಂದ ರೂಪಶ್ರೀ ತಾಯಿ ಮತ್ತು ಗಾಯಗೊಂಡವರಿಗೆ ಸಹಾಯಧನದ ಚೆಕ್ ವಿತರಿಸಿದರು.
ಇನ್ನು ಗಾಯಗೊಂಡ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ತಿಳಿಸಿದ ಪದ್ಮರಾಜ್, ನಿಮ್ಮೊಂದಿಗೆ ಸದಾ ನಾವಿದ್ದೇವೆ ಎನ್ನುವ ಭರವಸೆಯ ಮಾತು ಹೇಳುವ ಮೂಲಕ ನೊಂದ ಕುಟುಂಬದ ಕಣ್ಣೀರೊರೆಸುವ ಕಾರ್ಯದಲ್ಲಿ ತೊಡಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮುಂಬೈ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಚೇರ್ಮನ್ ಸೂರ್ಯಕಾಂತ್ ಜೆ. ಸುವರ್ಣ, ರಾಜೇಂದ್ರ ಚಿಲಿಂಬಿ, ಪ್ರವೀಣ್ ಕುಮಾರ್ ಅರ್ಕುಳ,ಪದ್ಮನಾಭ ಕೋಟ್ಯಾನ್ ಕಾಟಿಪಳ್ಳ ಮೊದಲಾದವರಿದ್ದರು.