ಕುಂದಾಪುರ, ಎ15(SS): ಬೈಕಿಗೆ ಅಪರಿಚಿತ ವಾಹನವೊಂದು ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಕುಂದಾಪುರ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ ಗಭೀರ ಗಾಯಗೊಂಡು ಜೀವನ್ಮರಣ ಸ್ಥಿತಿ ತಲುಪಿದ ಘಟನೆ ಬ್ರಹ್ಮಾವರದ ಸಮೀಪ ಮಾಬುಕಳ ಸೇತುವೆ ಬಳಿ ನಡೆದಿದೆ.
ಘಟನೆಯಲ್ಲಿ ಗಂಭೀರಗೊಂಡ ಪೊಲೀಸ್ ಕಾನ್ಸ್ಟೇಬಲ್ನನ್ನು ಕುಂದಾಪುರ ತಾಲೂಕಿನ ತಲ್ಲೂರು ಉಪ್ಪಿನಕುದ್ರು ನಿವಾಸಿ ಪ್ರಸ್ತುತ ಕುಂದಾಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಂದ್ರಶೇಖರ್ (43) ಎಂದು ಗುರುತಿಸಲಾಗಿದೆ.
ಪೊಲೀಸ್ ಸಿಬ್ಬಂದಿ ಚಂದ್ರಶೇಖರ್ ಭಾನುವಾರ ಸಂಜೆ ಉಡುಪಿಯಿಂದ ತನ್ನ ಬೈಕಿನಲ್ಲಿ ಕರ್ತವ್ಯ ಮುಗಿಸಿ ಕುಂದಾಪುರಕ್ಕೆ ವಾಪಾಸ್ಸಾಗುತ್ತಿದ್ದರು. ಬ್ರಹ್ಮಾವರ ಸಮೀಪದ ಮಾಬುಕಳ ಸೇತುವೆ ಬಳಿ ಬರುತ್ತಿದ್ದಂತೆ ಹಿಂದುಗಡೆಯಿಂದ ಬಂದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ ಎನ್ನಲಾಗಿದೆ.
ಅಪಘಾತದಿಂದ ಬೈಕ್ ರಸ್ತೆ ಬದಿಯ ಡಿವೈಡರ್ಗೆ ಎಸೆಯಲ್ಪಟ್ಟಿದ್ದು, ಚಂದ್ರಶೇಖರ್ ಕುತ್ತಿಗೆ ಹಾಗೂ ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಘಟನೆ ನಡೆದು 10 ನಿಮಿಷಗಳ ಕಾಲ ರಸ್ತೆಯಲ್ಲಿಯೇ ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎನ್ನಲಾಗಿದೆ.
ಇದೇ ವೇಳೆ ಹಿಂದಿನಿಂದ ಕುಂದಾಪುರ ಎಸೈ ಹರೀಶ್ ಹಾಗೂ ಚಾಲಕ ಲೋಕೇಶ್ ಉಡುಪಿ ಕಡೆಯಿಂದ ಬಂದಿದ್ದು, ರಸ್ತೆಯಲ್ಲಿ ಬಿದ್ದಿದ್ದ ಚಂದ್ರಶೇಖರ್ ಅವರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಪಘಾತದಲ್ಲಿ ಚಂದ್ರಶೇಖರ್ ತಲೆಗೆ ಗಂಭೀರ ಗಾಯಗಳಾಗಿದ್ದು, ಮೆದುಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಚಂದ್ರಶೇಖರ್ 17 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಳೆದ ಎರಡು ವರ್ಷಗಳಿಂದ ರೈಟರ್ ಆಗಿ ಕೆಲಸ ಮಾಡಿಕೊಂಡಿದ್ದರು. ಈ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.