ಮಂಗಳೂರು, ಅ 28 (DaijiworldNews/HR): ಬರ ಪರಿಹಾರ ವಿಚಾರದಲ್ಲಿ ರಾಜ್ಯದಲ್ಲಿ ಸಿ.ಎಂ ಸಿದ್ದರಾಮಯ್ಯರಿಗೆ ಅನುಭವದ ಕೊರತೆಯಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಲೇವಡಿ ಮಾಡಿದ್ದಾರೆ.
ಸುದ್ದಿಗೋಷ್ಠಿ ಮಾತನಾಡಿದ ರಾಜ್ಯಾಧ್ಯಕ್ಷ ನಳಿನ್, ಬರ ಪರಿಹಾರ ನೀಡುವ ಬಗ್ಗೆ ಕೇಂದ್ರಕ್ಕೆ ಅದರದ್ದೇ ಆದ ನಿಯಮಗಳಿವೆ. ಕೇಂದ್ರಕ್ಕೆ ರಾಜ್ಯದಿಂದ ವರದಿ ಹೋಗಬೇಕು. ಆ ವರದಿ ಬಂದ ಬಳಿಕ ಕೇಂದ್ರದಿಂದ ಅಧಿಕಾರಿಗಳು ಬಂದು ಸರ್ವೆ ಮಾಡುತ್ತಾರೆ. ಅದರ ಆಧಾರದಲ್ಲಿ ಹಣ ಬಿಡುಗಡೆಯಾಗುತ್ತದೆ. ಆದರೆ ಸಿದ್ದರಾಮಯ್ಯರಿಗೆ ಅನುಭವದ ಕೊರತೆಯಿದೆ. ಆದ್ದರಿಂದ ಕೇಂದ್ರ ಸರಕಾರ ಹಣ ಕೊಟ್ಟಿಲ್ಲ ಎಂಬ ಹೇಳಿಕೆ ನೀಡುತ್ತಿದ್ದಾರೆ. ಸಿಎಂ ಜಾಣಮರೆವು ಪ್ರದರ್ಶನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹಿಂದೆ ಸಿಎಂ ಆಗಿದ್ದಾಗ 4 ಸಾವಿರ ರೈತರ ಆತ್ಮಹತ್ಯೆ ಮಾಡಿದ್ದರು. ಇದೀಗ ಸಿದ್ದರಾಮಯ್ಯ ಸಿಎಂ ಆದ ಐದೇ ತಿಂಗಳಲ್ಲಿ 250 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ದರಿಂದ ಬರ ಹಾಗೂ ರೈತರ ಆತ್ಮಹತ್ಯೆಯ ಬಗ್ಗೆ ಅಧ್ಯಯನ ಮಾಡಲು ಬಿಜೆಪಿಯಿಂದ ತಂಡ ಅಧ್ಯಯನ ಮಾಡಲಿದೆ. ಬರಘೋಷಣೆಯಾಗಿರುವ ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ಅಧ್ಯಯನ ಮಾಡಲಿದೆ. ನವೆಂಬರ್ 10 ರೊಳಗೆ ಈ ತಂಡ ವರದಿ ನೀಡಲಿದೆ ಎಂದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇಲೆ ರಾಜ್ಯ ಕಾಂಗ್ರೆಸ್ ಸರಕಾರ ಎರಡು ಕೇಸ್ ದಾಖಲಿಸಿ ಶಾಸಕರ ಕರ್ತವ್ಯವನ್ನು ಹತ್ತಿಕ್ಕಲೆತ್ನಿಸಿ ದ್ವೇಷದ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಸರ್ವಾಧಿಕಾರಿ ಧೋರಣೆ, ಹಿಟ್ಲರ್ ಧೋರಣೆಯಲ್ಲಿ ರಾಜ್ಯಭಾರ ಮಾಡುತ್ತಿದೆ. ಅಧಿಕಾರಿಗಳು ವರ್ತನೆಯನ್ನು ಸರಿಪಡಿಸಬೇಕು. ಅಧಿಕಾರಿಗಳು ಗೂಂಡಗಿರಿ ಮಾಡಬಾರದು ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.