ಮಂಗಳೂರು, ಅ.27(DaijiworldNews/HR/AA): ನವೆಂಬರ್ 1 ರಂದು 66 ಮಂದಿ ತಳ್ಳುಗಾಡಿ ವ್ಯಾಪಾರಿಗಳಿಗೆ ದ.ಕ. ಉಸ್ತುವಾರಿ ಸಚಿವ ಗುಂಡೂರಾವ್ ಅವರು ಗುರುತಿನ ಚೀಟಿ ನೀಡಲಿದ್ದಾರೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ನಡೆಸಿದ 2ನೇ ಫೋನ್ ಇನ್ ಕಾರ್ಯಕ್ರಮದಲ್ಲಿ ದೂರುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ನಗರದ ಹೃದಯಭಾಗದಲ್ಲಿ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ಮಾಡುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ವಸತಿ ಪ್ರದೇಶದಲ್ಲಿ ಒಂದು ಉತ್ತಮ ಪ್ರದೇಶವನ್ನು ಆಯ್ಕೆ ಮಾಡಿ, ಮೂಲಭೂತ ಸೌಕರ್ಯವನ್ನು ಕಲ್ಪಿಸಿ ಕೊಟ್ಟು ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಲಾಗುವುದು ಎಂದರು. ಗುರುತಿನ ಚೀಟಿಗಾಗಿ 900 ಮಂದಿ ಅರ್ಜಿ ಸಲ್ಲಿಸಿದ್ದು, ಈ ಪೈಕಿ ಮೊದಲ ಹಂತದಲ್ಲಿ ಕೇವಲ 66 ಮಂದಿಗೆ ನವೆಂಬರ್ 1 ರಂದು ಗುರುತಿನ ಚೀಟಿ ನೀಡಲಾಗುತ್ತಿದೆ ಎಂದರು.
ಇವತ್ತಿನ ಫೋನ್ ಇನ್ ಕಾರ್ಯಕ್ರಮದಲ್ಲಿ ನಮಗೆ 26 ದೂರುಗಳು ಬಂದಿದೆ. ಕುಡಿಯುವ ನೀರು, ಡ್ರೈನೇಜ್, ಫುಟ್ ಪಾತ್, ಬೀದಿ ಬದಿ ವ್ಯಾಪರಸ್ಥರ ಸಮಸ್ಯೆಗಳು ಬಂದಿವೆ. ಫೋನ್ ಇನ್ ಅಲ್ಲಿ ಬಂದ ಈ ಎಲ್ಲಾ ದೂರುಗಳನ್ನು ಸೋಮವಾರ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ. ಮೂಲಭೂತ ವ್ಯವಸ್ಥೆಯನ್ನು ಜನರಿಗೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸಮಸ್ಯೆಗಳಿಗೆ ಪೂರ್ಣ ಪರಿಹಾರ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ನಾವು ಮಾಡುತ್ತೇವೆ ಎಂದರು.
ಇನ್ನು ಮುಂದೆ ನಗರ ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ರೀತಿಯ ಜಾತ್ರಾ ಸಂತೆ ವ್ಯಾಪಾರಕ್ಕೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ತಪಾಸಣೆ ನಡೆಸಲಿದ್ದಾರೆ. ಸಾರ್ವಜನಿಕರ ಆರೋಗ್ಯಕ್ಕೆ ತೊಂದರೆ ಆಗುವಂತಹ ಆಹಾರ ಮಾರಾಟದ ಅಂಗಡಿಗಳು ಕಂಡುಬಂದರೆ ಸೂಕ್ತ ಕ್ರಮ ವಹಿಸಲಾಗುವುದು. ಮಂಗಳೂರು ದಸರಾ ಸಂದರ್ಭ ಮಟ್ಕಾ ಸೋಡಾ ಅಂಗಡಿಯೊಂದರ ವೈರಲ್ ವೀಡಿಯೋ ಕುರಿತಂತೆ ದಾಳಿ ನಡೆಸಿದ್ದ ಅಧಿಕಾರಿಗಳು ಆ ಅಂಗಡಿಯ ಸಾಮಗ್ರಿಗಳನ್ನು ವಶಪಡಿಸಿಕೊಂಡು ಕ್ರಮ ವಹಿಸಿದ್ದಾರೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ. ಇನ್ನು ಮಂಗಳೂರು ದಸರಾ ಸಂದರ್ಭ ಮಟ್ಕಾ ಸೋಡಾ ಅಂಗಡಿಯೊಂದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಮಟ್ಕಾ ಸೋಡಾ, ಪೊಟಾಟೋ ಟ್ವಿಸ್ಟರ್, ಲೈಯಮ್ ಸೋಡಾ, ಗೋಬಿ ಹಾಗೂ ಶುಗರ್ ಕೇನ್ ಜ್ಯೂಸ್ ಅಂಗಡಿಗಳಿಗೆ ದಾಳಿ ನಡೆಸಿದ್ದು, ಅಂಗಡಿಗಳಲ್ಲಿನ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದರು.
ಈ ಸಂದರ್ಭ ಪಾಲಿಕೆ ಆಯುಕ್ತ ಆನಂದ್ ಸಿ.ಎಲ್., ಕಾರ್ಯನಿರ್ವಾಹಕ ಅಧಿಕಾರಿ ನರೇಶ್ ಶೆಣೈ, ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತಿತರರು ಉಪಸ್ಥಿತರಿದ್ದರು.