ಉಡುಪಿ, ಅ 25 (DaijiworldNews/MS): ಕೋಟ ಠಾಣಾ ವ್ಯಾಫ್ತಿಯಲ್ಲಿ ನಡೆದಿದೆ ಎನ್ನಲಾದ ದಲಿತ ದೌರ್ಜನ್ಯ ಮತ್ತು ಕಳವು ಪ್ರಕರಣದ ಕುರಿತು ದೂರುದಾರರಾದ ಕಿರಣ್ ಕುಮಾರ್ ಶೆಟ್ಟಿ ತಮ್ಮ ವಿರುದ್ದ ಸಂತ್ರಸ್ತರು ಮಾಡಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಈ ಕುರಿತು ಉಡುಪಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕಿರಣ್ ಕುಮಾರ್ ಶೆಟ್ಟಿ “ ಸೆ 1 ಮತ್ತು 02 ರಂದು ಮನೆ ಕೆಲಸಕ್ಕೆ ಕೆಲಸಗಾರರು ಬಂದಿದ್ದು, ಈ ಸಂದರ್ಭ ನನ್ನ 27ಗ್ರಾಂ ತೂಕದ 2,00,000 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಬಳೆ ಕಳೆದು ಹೋಗಿದ್ದು ಕೋಟ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ
ಮನೆ ಕೆಲಸಕ್ಕೆ ಬಂದಿದ್ದ ಸುಜಾತ ಕುಲಾಲ ಮತ್ತು ಆಶಾ ಶೆಟ್ಟಿ ಎನ್ನುವರ ಬಳಿ ವಿಚಾರಿಸಿದ್ದಾಗ ಸಂಶಯಾಸ್ಪದವಾಗಿ ಉತ್ತರ ಕೊಟ್ಟಿದ್ದು, ಅದಲ್ಲದೇ ಮನೆಯ ಒಳಗೆ ಮತ್ತು ಹೊರಗಿರುವ ಸಿ.ಸಿ ಕ್ಯಾಮರಾದಲ್ಲಿ ಇವರ ಬಗ್ಗೆ ಶಂಕೆ ವ್ಯಕ್ತವಾಗುವ ರೀತಿಯಲ್ಲಿ ನಡವಳಿಕೆ ತೋರುತ್ತಿದ್ದರು. ಪ್ರಕರಣವು ಪೋಲಿಸ್ ತನಿಖೆಯ ಹಂತದಲ್ಲಿದೆ.
ಪೋಲಿಸ್ ದೌರ್ಜನ್ಯದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು “ಪೋಲಿಸರು ತನಿಖೆ ಮಾಡಿದ್ದಾರೆ ವಿನಃ ಯಾವುದೇ ದೌರ್ಜನ್ಯ ಮಾಡಿಲ್ಲ, ಅಲ್ಲದೆ ಸುಜಾತ ಅವರು ಕುಲಾಲ ಜಾತಿ ಮತ್ತು ಅಶಾ ಅವರು ಶೆಟ್ಟಿ ಜಾತಿಗೆ ಸೇರಿದ್ದವರಾಗಿದ್ದು, ದಲಿತ ದೌರ್ಜನ್ಯ ಹೇಗೆ ಆಗುತ್ತದೆ. ಪೋಲಿಸ್ ತನಿಖೆಯ ಬಗ್ಗೆ ಆರೋಪ ಮಾಡುತ್ತಿರುವರು, ದಲಿತ ದೌರ್ಜನ್ಯ ಕೇಸು ದಾಖಲಿಸಬೇಕೆಂದು ಆಗ್ರಹಿಸುತ್ತಿರುವ ಹಾಸ್ಯಾಸ್ಪದವಾಗಿದೆ. ಕಳ್ಳತನವಾದಾಗ ಪೊಲೀಸ್ ಇಲಾಖೆಗೆ ಸಹಕಾರವನ್ನು ನೀಡಬೇಕು ಬದಲು ಒತ್ತಡ ಹಾಕುವುದು ಸರಿಯಲ್ಲ. ನಾನು ಆರೋಪಿಗಳನ್ನು ಆಸ್ಪತ್ರೆಗೆ ಹೋಗಿ ಬೇಟಿ ಮಾಡಿಲ್ಲ, ಮತ್ತು ಯಾವುದೇ ಕಾರಣಕ್ಕೂ ಅವರಿಗೆ ಹಣ ನೀಡಿಲ್ಲ. ಈವರೆಗೆ ನನಗೆ ಚಿನ್ನ ಸಿಕ್ಕಿಲ್ಲ, ಅಲ್ಲದೆ ತನಿಖೆಗೆ ಸ್ಥಳ ಮಹಜರಿಗೆ ಬಂದಾಗ ಆರೋಪಿಗಳಿಗೆ ಹಲ್ಲೆ ಮಾಡಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಎನ್ನುವುದು ಶುದ್ಧ ಸುಳ್ಳು ಹೇಳಿಕೆಯಾಗಿದ್ದು, ಅವರು ಸ್ಥಳ ಮಹಜರಿಗೆ ಬಂದು ಹೋಗುವಾದ ಸಿಸಿ ಕ್ಯಾಮರಾಗಳ ಫೂಟೇಜ್ ಅಲ್ಲಿ ರೆಕಾರ್ಡ್ ಆಗಿದೆ. ಅದನ್ನು ಪೋಲಿಸ್ ಇಲಾಖೆಗೆ ನೀಡಲಾಗಿದೆ. ಸುಳ್ಳು ಆರೋಪಗಳನ್ನು ಮಾಡಿ ನನ್ನ ಕುಟುಂಬವನ್ನು ತೇಜೋವಧೆ ಮಾಡುವುದನ್ನು ನಿಲ್ಲಿಸಬೇಕು. ಪ್ರತಿಭಟನೆಗೆ ಕರೆ ನೀಡಿರುವ ಸಂಘಟನೆಗಳು ಪ್ರಕರಣದ ಸತ್ಯಾಸತ್ಯತೆಗಳನ್ನು ಅರ್ಥ ಮಾಡಿಕೊಂಡು, ಪೊಲಿಸರಿಗೆ ಯಾವುದೇ ಒತ್ತಡವನ್ನು ಹಾಕದೇ ನನಗೆ ನನ್ನ ಚಿನ್ನವನ್ನು ಮರಳಿ ದೊರಕಿಸಿಕೊಡುವಲ್ಲಿ ಸಹಕಾರ ಮಾಡಬೇಕು” ಎಂದರು.
ಈ ಸಂದರ್ಭದಲ್ಲಿ ಸಂದೀಪ್ ಮತ್ತು ಮನೀಷ್ ಉಪಸ್ಥಿತರಿದ್ದರು.