ಕುಂದಾಪುರ, ಅ 24 (DaijiworldNews/AK):ನವರಾತ್ರಿಗೆ ಗೊಂಬೆಗಳನ್ನು ಕೂರಿಸುವ ಪದ್ದತಿ ಹಲವೆಡೆ ಇದೆ. ಅದೇ ರೀತಿ ವಡೇರಹೋಬಳಿಯ ‘ಪ್ರಕೃತಿ’ ನಿವಾಸದ ಹಿರಿಯ ಫಾರ್ಮಸಿ ಅಧಿಕಾರಿ ಬಿ.ಎನ್. ಚಂದ್ರಶೇಖರ ಮತ್ತು ಶೀಲಾ ಚಂದ್ರಶೇಖರ ಅವರ ಮನೆಯಲ್ಲಿ ಕಳೆದ ವರ್ಷದ ನವರಾತ್ರಿಯಿಂದ ಈ ಗೊಂಬೆ ಕೂರಿಸುವ ಪದ್ದತಿ ನಡೆಯುತ್ತಿದೆ.
ಇವರ ಸೊಸೆ ಐಶ್ವರ್ಯ ಅವಿನವ್ ತನ್ನ ತವರು ಭಾಗದ ಆಚರಣೆಯನ್ನು ಇಲ್ಲಿಗೂ ಪರಿಚಯಿಸಿದ್ದಾರೆ. ಹಲವು ವೈವಿಧ್ಯಮಯ, ಪುರಾಣ ಕಥೆಗಳನ್ನು ಹೇಳುವ ಗೊಂಬೆಗಳ ಆರಾಧನೆ ಪರಿಸರದ ಜನರ ಕುತೂಹಲ ಕೆರಳಿಸಿದೆ.ವಿಶೇಷವಾಗಿ ಮಕ್ಕಳನ್ನು ಆಕರ್ಷಿಸಿದೆ.
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಅವಿನವ್ ಬಿ ಹಾಗೂ ಐಶ್ವರ್ಯ ಪಿ ದಂಪತಿ ಕಳೆದ ವರ್ಷದಿಂದ ಕುಂದಾಪುರದಲ್ಲಿ ಗೊಂಬೆಗಳನ್ನು ಕುರಿಸುವ ಮೂಲಕ ವಿಶಿಷ್ಟವಾಗಿ ನವರಾತ್ರಿ ಆಚರಣೆ ಮಾಡುತ್ತಿದ್ದಾರೆ.
ಪ್ರತಿಯೊಂದು ಗೊಂಬೆಗಳು ತನ್ನದೇ ಆದ ಕಥೆಯನ್ನು ಹೇಳುತ್ತವೆ.ಪೌರಾಣಿಕ ಕಥೆಗಳನ್ನು ಹೇಳುವಂತೆ ಗೊಂಬೆಗಳ ಜೋಡಣೆ ಮಾಡಿದ್ದಾರೆ.
ಈ ಗೊಂಬೆ ಕುರಿಸುವಿಕೆಯಲ್ಲಿ ಪ್ರಧಾನವಾದುದು ಪಟ್ಟದ ಗೊಂಬೆಗಳು. ರಾಜರಾಣಿಯ ಗೊಂಬೆಗಳು ಪ್ರಧಾನವಾಗಿರುತ್ತದೆ. ಇಲ್ಲಿ ಐಶ್ವರ್ಯ ಅವರು ಮೇಲ್ಬಾಗವನ್ನು ಬೆಳ್ಳಿಬೆಟ್ಟವನ್ನಾಗಿ ರೂಪಿಸಿದ್ದಾರೆ. ಶಿವಪಾರ್ವತಿ ಷಣ್ಮುಖ ಗಣಪತಿ ಹಾಗೂ ಶಿವಗಣಗಳು ಕೈಲಾಸ ಪರಿಕಲ್ಪನೆಯಲ್ಲಿ ಕಂಡು ಬಂದರೆ ಗಣಪತಿ ಚತುರ್ಥಿ ಧರೆಗೆ ಹೊರಟಂತಹ ಗೊಂಬೆ ಇದೆ.
ಬಳಿಕ ಮೈಸೂರು ದಸರ ಗೊಂಬೆಗಳನ್ನು ಜೋಡಿಸಿದ್ದಾರೆ. ನಂತರದ ಸಾಲುಗಳಲ್ಲಿ ದಶಾವತರಾದ ಗೊಂಬೆಗಳು, ದ್ರೋಣರ ಗುರುಕುಲ, ಕೃಷ್ಣನ ಬಾಲ್ಯಲೀಲೆಗಳು, ಪುರಾಣದ ಮಹತ್ವದ ಸನ್ನಿವೇಶದ ಗೊಂಬೆಗಳು, ಮದುವೆಯ ದಂಪತಿಗಳು ಹೀಗೆ ನೂರಾರು ಗೊಂಬೆಗಳು ಪುರಾಣದ ಎಳೆಯನ್ನು ಅತ್ಯಂತ ಸುಂದರವಾಗಿ ಕಟ್ಟಿಕೊಡುವಂತಿವೆ.
ಪುರಾಣದ ಕಥೆ ಹೇಳುವ ಗೊಂಬೆಗಳ ಜೊತೆಯಲ್ಲಿ ವಾಸ್ತವದ ಆಕರ್ಷಣೆ ಹಾಗೂ ಗ್ರಾಮಾಂತರ ಪ್ರದೇಶದ ಜನಜೀವನವನ್ನು ತಿಳಿಸುವ ಗೊಂಬೆಗಳು ಇವೆ.ಹಳ್ಳಿಯ ಬದುಕು, ಕೃಷಿ, ಮೃಗಾಲಯ, ಪ್ರಾಣಿ ಪಕ್ಷಿಗಳು ಇತ್ಯಾದಿ ಗೊಂಬೆಗಳು ಆಧುನಿಕತೆಯ ಕಥೆಯನ್ನು ಹೇಳುವಂತಿವೆ.
ಒಟ್ಟಾರೆಯಾಗಿ ಕುಂದಾಪುರದ ‘ಪ್ರಕೃತಿ’ ಗೊಂಬೆಗಳ ಲೋಕವನ್ನೆ ಸೃಷ್ಟಿಸಿದೆ.ಗೊಂಬೆಗಳನ್ನು ಕುರಿಸುವುದು ಒಂದು ಶ್ರದ್ದಾ ಧಾರ್ಮಿಕ ನಂಬಿಕೆ ಹಾಗೂ ಆಚರಣೆ. ಅದಕ್ಕೊಂದು ಆಚರಣಾ ಕ್ರಮವಿದೆ.ಒಂಭತ್ತು ದಿನಗಳ ಕಾಲ ಪೂಜೆ , ನೈವೇದ್ಯ ಮಾಡಬೇಕು. ಒಂದೊಂದು ದಿನ ಒಂದೊಂದು ಬಗೆಯ ತಿನಿಸು ನೈವೇದ್ಯಕ್ಕೆ ಮಾಡಲಾಗುತ್ತದೆ. ಒಂದಕ್ಕಿಮತ ಒಂದು ಸುಂದರವಾಗಿರುವ ಗೊಂಬೆಗಳು ಮಕ್ಕಳ ಕಣ್ಮನ ಸೆಳೆಯುತ್ತದೆ.