ಭಟ್ಕಳ, ಅ 23 (DaijiworldNews/AK/SK): ಉತ್ತರ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರಕ್ಕೆ 24 ವರ್ಷದ ಯುವಕ ಬಲಿಯಾಗಿದ್ದಾನೆ.ತಲಗೋಡ್ ನಿವಾಸಿ ಪ್ರಜ್ವಲ್ ಖಾರ್ವಿ ಮೃತಪಟ್ಟ ಯುವಕ.
ಭಟ್ಕಳ ಬಂದರಿನಲ್ಲಿ ಸಾಗರಶ್ರೀ ಮೀನುಗಾರಿಕೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಪ್ರಜ್ವಲ್ ಕಳೆದ ಮೂರು ನಾಲ್ಕು ದಿನದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ರಕ್ತ ತಪಾಸಣೆ ವೇಳೆ ಡೆಂಗ್ಯೂ ಸೋಂಕಿರುವುದು ಪತ್ತೆಯಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ರವಾನಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಜ್ವಲ್ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಭಟ್ಕಳ ಬಂದರಿನಲ್ಲಿ ಶುಚಿತ್ವ ಇಲ್ಲದ ಕಾರಣ ಹೆಚ್ಚು ಸೊಳ್ಳೆಗಳ ಉತ್ಪತ್ತಿಯಾಗುತಿದ್ದು, ಈ ಭಾಗದಲ್ಲಿ ಮೀನುಗಾರಿಕೆ ವೃತ್ತಿ ಮಾಡುತ್ತಿರುವ ಇನ್ನೂ ಇಬ್ಬರಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.