ಬಂಟ್ವಾಳ, ಅ.22(DaijiworldNews/AK):ನವರಾತ್ರಿ ಸಂದರ್ಭದಲ್ಲಿ ವಿವಿಧ ರೀತಿಯ ವೇಷಧರಿಗಳು ಕಾಣಸಿಗುವುದು ಸರ್ವೇ ಸಾಮಾನ್ಯ. ಹಾಗೇನೇ ಇಲ್ಲೊಬ್ಬ ವೇಷಧಾರಿ ಯಕ್ಷಗಾನದ ವೇಷ ಹಾಕಿದ್ದ ಎಂಬ ಕಾರಣಕ್ಕಾಗಿ ಹಿರಿಯ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಅವರು ವೇಷಧಾರಿ ವ್ಯಕ್ತಿಯನ್ನು ತಡೆದು,ವೇಷವನ್ನು ಕಳಚಿಸಿದ ಘಟನೆಯೊಂದು ಬಿಸಿರೋಡಿನಲ್ಲಿ ನಡೆದಿದೆ.
ಈ ವೇಳೆ ಮಾತಿನ ಚಕಮಕಿ ನಡೆದ ವಿಡಿಯೋ ವೈರಲ್ ಆಗಿದೆ.ದಾವಣಗೆರೆ ಮೂಲದ ವ್ಯಕ್ತಿ ಎಂದು ಹೇಳಲಾಗಿರುವ ವ್ಯಕ್ತಿ ಶನಿವಾರ ಬಿಸಿರೋಡಿನ ಬ್ರಹ್ಮಶ್ರೀ ನಾರಾಯಣ ಮಂದಿರದ ಬಳಿ ಯಕ್ಷಗಾನದ ವೇಷ ಹಾಕಿ ಹೋಗುತ್ತಿದ್ದ .ಈ ವೇಳೆ ಸ್ಥಳಕ್ಕೆ ಆಗಮಿಸಿದ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಅವರು ಯಕ್ಷಗಾನದ ವೇಷ ಹಾಕುವಂತಿಲ್ಲ,ಅದನ್ನು ತೆಗೆಯುವಂತೆ ಒತ್ತಾಯ ಮಾಡುವ ಬಗ್ಗೆ ವಿಡಿಯೋದಲ್ಲಿ ಕಂಡು ಬಂದಿದೆ.
ಯಕ್ಷಗಾನ ವನ್ನು ನಾವು ಇಲ್ಲಿ ಪೂಜೆ ಮಾಡುತ್ತೇವೆ ನಿನಗೆ ಗೊತ್ತಿದೀಯಾ? ನೀನು ವೇಷು ಹಾಕಿ ಬಿಕ್ಷೆ ಬೇಡುತ್ತಿಯಾ ಎಂದು ಪ್ರಶ್ನಿಸಿದ್ದಾರೆ.ಅದಕ್ಕೆ ಯಕ್ಷಗಾನ ವೇಷಧಾರಿ ನಾನು ತಪ್ಪು ಮಾಡಿದ್ದರೆ ನನಗೆ ಹೊಡೆಯಿರಿ ಎಂದು ಹೇಳಿದಾಗ ಹೊಡೆಯುವುದು ಅಲ್ಲ
ವೇಷ ತೆಗೆಯದಿದ್ದಲ್ಲಿ ಕೈ ಕಾಲು ಮುರಿದು ಹಾಕುವಂತೆ ಬೆದರಿಸಿ,ಬೈದಿರುವ ವಿಡಿಯೋ ಇದೀಗ ವೈರಲ್ ಆಗಿದೆ.ವೇಷಧಾರಿಯ ವೇಷವನ್ನು ಕಳಚಿದ ಘಟನೆಯ ಬಗ್ಗೆ ವಿಡಿಯೋ ವೈರಲ್ ಆದ ಕೂಡಲೇ ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆಗಳು ಆರಂಭವಾಗಿದೆ.
ಯಕ್ಷಗಾನದ ಕಲೆಯ ಬಗ್ಗೆ ಅಪಚಾರ ಮಾಡುವುದು ಕೂಡ ಸರಿಯಲ್ಲಅವಹೇಳನಕಾರಿಯಾಗಿ ವೇಷಧರಿಸಿ ಕಲೆಯ ಬಗ್ಗೆ ನಿಂದನೆ ಮಾಡುವ ಕೆಲಸಗಳು ನಡೆಯಬಾರದು ಎಂಬ ಕೂಗು ಒಂದೆಡೆಯಾದರೆ, ವೇಷಧಾರಿಯ ಜೊತೆ ಇವರು ನಡೆದುಕೊಂಡ ನಡವಳಿಕೆ ಸರಿಯಲ್ಲ ಎಂಬ ಮಾತುಗಳು ಕೇಳಿಬಂದಿದೆ.
ಜಿಲ್ಲಾಡಳಿತ ಯಾವ ಯಾವ ವೇಷವನ್ನು ಹಾಕಬಾರದು ಎಂಬುದನ್ನು ಸುತ್ತೋಲೆ ಹೊರಡಿಸಬೇಕು. ಅಧಿಕೃತವಾಗಿ ಯಾವುದೇ ವೇಷವನ್ನು ಹಾಕಬಾರದು ಸುತ್ತೋಲೆಗಳಿಲ್ಲದ ಕಾರಣ ಅವರನ್ನು ತಡೆಯುವ ಹಕ್ಕು ಇಲ್ಲ ಎಂಬುದು ಇಲಾಖೆಯ ಸ್ಪಷ್ಟನೆಯಾಗಿದೆ.