Karavali
ಕಾರ್ಕಳ: 'ಪರಶುರಾಮ ಥೀಮ್ ಪಾರ್ಕ್ ಧಾರ್ಮಿಕ ಕ್ಷೇತ್ರವಲ್ಲ' - ಸುನಿಲ್ ಕುಮಾರ್
- Sun, Oct 22 2023 11:48:32 AM
-
ಕಾರ್ಕಳ, ಅ 22 (DaijiworldNews/HR): ಯಾರು ಕಾರ್ಕಳವನ್ನು ಪ್ರೀತಿಸುತ್ತಾರೋ ಅವರು ಕಾರ್ಕಳವನ್ನು ಅಭಿವೃದ್ದಿ ಮಾಡುತ್ತಾರೆ. ನಾನು ಕಾರ್ಕಳವನ್ನು ಹೃದಯಪೂರ್ವಕವಾಗಿ ಪ್ರೀತಿಸುವವನು ಹಾಗಾಗಿ ಕಳೆದ 20 ವರ್ಷಗಳಲ್ಲಿ ಅಭಿವೃದ್ದಿ ಮಾಡಿ ತೋರಿಸಿದ್ದೇನೆ. ಯಾರಿಗೆ ಕಾರ್ಕಳದ ಬಗ್ಗೆ ಪ್ರೀತಿ ಅಭಿಮಾನವಿಲ್ಲವೋ ಅವರು ಕಾರ್ಕಳದ ಬಗ್ಗೆ ಅಪಪ್ರಚಾರ, ಅವಹೇಳನ, ಪ್ರವಾಸೋದ್ಯಮಕ್ಕೆ ದಕ್ಕೆ ತರುವ ಕಾರ್ಯವನ್ನು ಮಾಡುತ್ತಿದ್ದಾರೆ. ಮುಂದೆಯೂ ನೂರಾರು ಯೋಜನೆಯನ್ನು ಕಾರ್ಕಳಕ್ಕೆ ತರುತ್ತೇನೆ ಎಂದು ಮಾಜಿ ಸಚಿವ, ಶಾಸಕ ವಿ.ಸುನಿಲ್ ಕುಮಾರ್ ಹೇಳಿದರು.
ಕಾರ್ಕಳದ ವಿಕಾಸ ಕಛೇರಿಯಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನವೆಂಬರ್ ತಿಂಗಳಲ್ಲಿ ಡೀಲ್ ಮಾಸ್ಟರ್ ಆಗಮನವಾದ ಬಳಿಕ ಒಂದು ಸುಳ್ಳನ್ನು ನೂರು ಬಾರಿ ಹೇಳುವ ಕೆಲಸವಾಗುತ್ತಿದೆ. ಸಜ್ಜನರ ಮೌನ ದುರ್ಜನರು ವಿಜೃಂಭನೆಯನ್ನು ಮಾಡುತ್ತಿದ್ದಾರೆ. ಕೆಲವರಿಗೆ ಮಾತನಾಡುವ ಚಟ ಹೀಗಾಗಿ ನೂರಾರು ಆಧಾರ ರಹಿತ ಆರೋಪವನ್ನು ಮಾಡುತ್ತ ಬಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಎಡಪಂಥಿಯರು, ನಗರ ನಕ್ಸಲರು, ಅನ್ಯಧರ್ಮಿಯರು ಎಲ್ಲರೂ ಒಟ್ಟಾಗಿ ನಮ್ಮ ವಿಚಾರವನ್ನು ದಾಳಿ ಮಾಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಬಿಜೆಪಿಯ ಮೇಲೆ ಯಾವ ರೀತಿಯಲ್ಲಿ ದಾಳಿ ಮಾಡಬಹುದು ಎಂದು ವ್ಯವಸ್ಥಿತ ಸಂಚು ನಡೆಯುತ್ತಿದೆ. ಇದು ಕೇವಲ ಕಾರ್ಕಳದಲ್ಲಿ ಮಾತ್ರವಲ್ಲ ಇಡೀ ರಾಜ್ಯ ದೇಶದಲ್ಲಿ ನಡೆಯುತ್ತಿದೆ ಎಂದರು.
ಇನ್ನು ಪರಶುರಾಮ ಥೀಮ್ ಪಾರ್ಕ್ ಇವತ್ತು ಸಭೆಯಲ್ಲಿ ತೀರ್ಮಾನ ಮಾಡಿ ನಾಲ್ಕು ತಿಂಗಳಲ್ಲಿ ದುಡ್ಡು ತಂದು ನಿರ್ಮಾಣ ಮಾಡಿರುವುದಲ್ಲ. ಹತ್ತು ವರ್ಷಗಳಿಂದ ಕನಸ್ಸು ಕಂಡಿದ್ದೇನೆ. ಹತ್ತು ವರ್ಷಗಳಿಂದ ಯೋಚನೆಯನ್ನು ಮಾಡುತ್ತ ಆ ಯೋಜನೆಯನ್ನು ಜಾರಿಗೆ ತರುವ ಪ್ರಯತ್ನವನ್ನು ಪ್ರಮಾಣಿಕವಾಗಿ ಮಾಡಿದ್ದೇನೆ. ಕನಸ್ಸಿನ ಯೋಜನೆ ಎಷ್ಟು ವೈಭವ, ಸಂಭ್ರಮ ಸಡಗರದಿಂದ ಜರುಗಿತ್ತು. ಕಾರ್ಕಳ ಮಾತ್ರವಲ್ಲದೆ ಇಡೀ ಜಿಲ್ಲೆಯ ಜನ ಸಂಭ್ರಮಿಸಿದ್ದರು. ಒಂದು ಪ್ರವಾಸೋದ್ಯಮ ರಾತ್ರಿ ಬೆಳಗಾಗುವುದರಲ್ಲಿ ಉದ್ಭವ ಆಗುವುದಿಲ್ಲ. ನಮ್ಮ ಮನೆಗೆ ನೆಂಟರು ಬಂದಾಗ ಥೀಮ್ ಪಾರ್ಕಿಗೆ ಕರೆದುಕೊಂಡು ಹೋದಾಗ ಪ್ರವಾಸೋದ್ಯಮ ಬೆಳೆಯುತ್ತದೆ ಎನ್ನುವ ಕನಸ್ಸನ್ನು ಕಂಡಿದ್ದೆವು ಎಂದಿದ್ದಾರೆ.
ಈ ಯೋಜನೆಯು ಪೂರ್ಣವಾಗಿಲ್ಲ ಸಣ್ಣ ಪುಟ್ಟ ಬದಲಾವಣೆಗಳಿವೆ ಎರಡು ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂದು ನಾವು ಅವತ್ತೇ ಹೇಳಿದ್ದೆವು. ಈಗ ತುಂಬಾ ಜನ ಮಾತನಾಡುತ್ತಾರೆ ಪರಶುರಾಮ ಥೀಮ್ ಪಾರ್ಕಿನಲ್ಲಿ ಹಿಂದುತ್ವಕ್ಕೆ ಧಕ್ಕೆಯಾಗಿದೆ. ಪರಶುರಾಮರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ ನಾನು ಮೊದಲ ಸಭೆಯಲ್ಲೇ ಹೇಳಿದ್ದೇನೆ ಪರಶುರಾಮ ಥೀಮ್ ಪಾರ್ಕ್ ಒಂದು ಧಾರ್ಮಿಕ ಕ್ಷೇತ್ರವಲ್ಲ. ಅದೊಂದು ಥೀಮ್ ಪಾರ್ಕ್. ಅಲ್ಲಿ ಹೋಗಿ ತೆಂಗಿನಕಾಯಿ ಹೊಡೆಯಲಿಕ್ಕೆ ಇಲ್ಲ, ಊದುಬತ್ತಿ ಹಚ್ಚಿಲಿಕ್ಕೆ ಇಲ್ಲ. ಅಲ್ಲಿ ಮಂಗಳಾರತಿ ಮಾಡ್ಲಿಕೆಯಿಲ್ಲ ಅದೊಂದು ಪ್ರವಾಸೋದ್ಯಮ ಸ್ಥಳ ಎಂದು ಅವತ್ತೇ ಹೇಳಿದ್ದೇವು. ಧಾರ್ಮಿಕತೆಯ ವಿಚಾರ ಮಾತನಾಡುವವರು ಅಲ್ಲಿ ಭಜನಾ ಮಂದಿರವನ್ನು ಮಾಡಿದ್ದೇವೆ ಅದಕ್ಕೆ ಒಂದು ಬಾರಿಯೂ ಭೇಟಿಯನ್ನು ನೀಡಿಲ್ಲ ಅಂತವರು ಪರಶುರಾಮರ ಬಗ್ಗೆ ಮಾತನಾಡುತ್ತಾರೆ ಎಂದರು.
ಮೊದಲ ದಿನ ಪರಶುರಾಮರ ವಿಗ್ರಹದ ಉದ್ಘಾಟನೆ ನಡೆಯಿತು. ಎರಡನೇ ದಿನ ಭಜನಾ ಮಂದಿರ ಉದ್ಘಾಟನೆ ನಡೆಯಿತು. ಧಾರ್ಮಿಕತೆಯ ಸ್ಪರ್ಶತೆ ಬೇರೆ ಥೀಮ್ ಪಾರ್ಕಿನ ಸ್ಪರ್ಶತೆ ಬೇರೆ. ಮೂರನೇ ದಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಬೈಲೂರು ಮೈದಾನದಲ್ಲಿ ಮಾಡಿದ್ದೇವೆ ಎಲ್ಲವೂ ಬೇರೆ ಬೇರೆ ಉದ್ಘಾಟನೆಯನ್ನು ಮಾಡಿದ್ದೇವೆ. ಆದರೆ ಅರೆಹುಚ್ಚರಿಗೆ ಇದು ಯಾವುದೂ ಕೂಡ ಅರ್ಥವಾಗುವುದಿಲ್ಲ. ಆರಂಭದಲ್ಲಿ ಇದು ಸಿಮೆಂಟ್, ಬಳಿಕ ಪಿಒಪಿ, ನಂತರ ಪ್ಲಾಸ್ಟಿಕ್, ಪೈಬರ್, ಸುತ್ತಿಗೆಯಲ್ಲಿ ಹೊಡೆದ ಬಳಿಕ ಕೆಳಗಿನ ಪಾರ್ಟ್ ಸರಿಯಿದೆ ಮೇಲ್ಭಾಗದಲ್ಲಿ ಸರಿಯಿಲ್ಲ ಹೀಗೆ ದಿನಕ್ಕೊಂದು ಕಟ್ಟು ಕಥೆಗಳನ್ನು ಕಟ್ಟುವ ಮೂಲಕ ಜನರನ್ನು ನಂಬಿಸುವ ಪ್ರಯತ್ನಗಳು ಪ್ರತೀ ನಿತ್ಯ ಮಾಡುತ್ತಿದ್ದಾರೆ. ಸುನೀಲ್ ಕುಮಾರ್ ಅವರ ಮೇಲೆ ಆರೋಪ ಇಂದು ನಿನ್ನೆಯದಲ್ಲ ಕಳೆದ ಹಲವು ವರ್ಷಗಳಿಂದಲೂ ಮಾಡುತ್ತ ಬಂದಿದ್ದಾರೆ. ಈ ಹಿಂದೆ ನನ್ನಲ್ಲಿ ನೂರು ಲಾರಿಗಳಿವೆ ಎಂದಿದ್ದರು ಆಧಾರವಿಲ್ಲದೆ ಅರೋಪ ಮಾಡುವುದೇ ಅವರ ಕೆಲಸವಾಗಿದೆ ಎಂದಿದ್ದಾರೆ.
ಮೂರ್ತಿಯ ಬಗ್ಗೆ ಅನುಮಾನಗಳಿದ್ದರೇ ನಿಮಗೆ ತನಿಖೆ ಮಾಡಬೇಡಿ ಎಂದು ಯಾರು ಹೇಳಿದ್ದಾರೆ. ಸರ್ಕಾರ ಬಂದು ಐದು ತಿಂಗಳಾಯಿತು ಯಾಕೆ ನೀವು ತನಿಖೆ ಮಾಡಿಲ್ಲ. ಗುಣಮಟ್ಟದಲ್ಲಿ ವ್ಯತ್ಯಾಸವಗಿದ್ದರೆ ಅವರನ್ನು ಗಲ್ಲಿಗೆ ಏರಿಸಿ, ಅವರ ಬಗ್ಗೆ ಶಿಕ್ಷೆಯಾಗಲಿ. ಈಗಲು ಹೇಳುತ್ತೇನೆ ತನಿಖೆ ಮಾಡಿ. ಕಾಂಗ್ರೆಸ್ನ ದಂಧ್ವ ಮತ್ತು ನಿಲುವು ತನಿಖೆ ಮಾಡಲು ತಯಾರಿಲ್ಲ. ಬಿಡುಗಡೆ ಮಾಡಿದ ಅನುದಾನವನ್ನು ಮಂಜೂರು ಮಾಡಲು, ಕೆಲಸವನ್ನು ಆರಂಭಿಸಲು, ಅಪಪ್ರಚಾರವನ್ನು ನಿಲ್ಲಿಸಲು ತಯಾರಿಲ್ಲ. ತನಿಖೆ ಮಾಡುವವರು ಯಾರು.? ಯಾರೋ ಚಿಲ್ಲರೆ ಗಿರಕಿ ಹೋಗಿ ಪೈಬರ್ ಎಂದರೆ ಆಗಲ್ಲ. ಯಾರಾದರೂ ಇಂಜಿನಿಯರ್ ಪರಿಶೀಲಿಸಿ ಏನು ಎಂದು ಹೇಳಬೇಕು. ಅದು ಬಿಟ್ಟು ಕಾಂಗ್ರೆಸ್ಸಿಗರು ತನಿಖಾಧಿಕಾರಿಗಳು ಆಗಲು ಸಾಧ್ಯವಿಲ್ಲ ಎಂದರು.
14.50 ಕೋಟಿ ರೂಪಾಯಿಯನ್ನು ಬಿಜೆಪಿ ಸರ್ಕಾರ ಮಂಜೂರು ಮಾಡಿಸಿದ್ದು, ಈಗಾಗಲೇ 6.50 ಕೊಟಿ ರೂಪಾಯಿ ಬಿಡುಗಡೆಯಾಗಿದೆ ಉಳಿದ 8 ಕೋಟಿ ರೂಪಾಯಿ ಮಂಜೂರಾತಿಯಾಗಿದೆ ಬಿಡುಗಡೆಯಗಬೇಕು. ಯಾಕೆ ಬಿಡುಗಡೆಯಾಗುತ್ತಿಲ್ಲ ಅಂದರೆ ಸಿದ್ದರಾಮಯ್ಯ ಸರ್ಕಾರ ಬಂದ ಬಳಿಕ ಜನವರಿಯಿಂದ ಬಿಜೆಪಿ ಯಾವೆಲ್ಲ ಯೋಜನೆಗಳಿಗೆ ಹಣವನ್ನು ಬಿಡುಗಡೆ ಮಾಡಿತ್ತೋ ಆ ಎಲ್ಲ ಹಣವನ್ನು ತಡೆಹಿಡಿದ್ದಿದ್ದಾರೆ. ಆ ಕಾರಣಕ್ಕೆ ಈ ಅನುದಾನವೂ ಬಿಡುಗಡೆಯಾಗುತ್ತಿಲ್ಲ. ಉದಯ್ ಕುಮಾರ್ ಶೆಟ್ಟಿ ಆಡಳಿತ ಪಕ್ಷದ ಒಬ್ಬ ಜವಬ್ದಾರಿಯುತ ಕಾರ್ಯಕರ್ತನಾಗಿದ್ದರೇ ನನ್ನ ಸರ್ಕಾರ ಬಂದಿದೆ ಇಷ್ಟು ಕೋಟಿ ರೂಪಾಯಿಯ ತಡೆ ಬಂದಿದೆ ಬಿಡುಗಡೆ ಮಾಡಿಸ್ತೇನೆ ಅಂತ ಹೇಳಿದರೆ ನಿಮ್ಮ ನಾಯಕತ್ವವನ್ನು ಮೆಚ್ಚುತ್ತಿದ್ದೆ ಎಂದಿದ್ದಾರೆ.
ಸೆ.9 ರಂದು ತಹಶೀಲ್ದಾರ್ ಆದೇಶ ಮಾಡುತ್ತಾರೆ ಕಾಮಗಾರಿಯನ್ನು ಮುಂದುವರಿಸಬೇಕು ಅದಕ್ಕಾಗಿ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸುತ್ತೇವೆ ಎಂದಿದ್ದರು ಆದರೆ ಇದು ಸುನೀಲ್ ಕುಮಾರ್ ಮಾಡಿದ ಆದೇಶವಲ್ಲ. ಮೂರ್ತಿದಾರರು ಗುತ್ತಿದಾರರು ಕಾಮಗಾರಿಯನ್ನು ಮುಂದುವರಿಸುತ್ತಾರೆ ಅದು ಆಗಿ ಎರಡೇ ದಿನಕ್ಕೆ ಕಾಮಗಾರಿ ಸ್ಥಗಿತವಾಗುತ್ತದೆ. ಯಾಕೆ ಕಾಮಗಾರಿಯನ್ನು ಸ್ಥಗಿತ ಮಾಡ್ತಿರಾ.? ಪೊಲೀಸರ ಸರ್ವಗಾವಲಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ವೀಡಿಯೋ ಹಾಕ್ತರೆ ಪೊಲೀಸರನ್ನು ಯಾರು ನಾವು ಹಾಕಿದ್ದಾ.? ಆ ಬಳಿಕ ಪೊಲೀಸರು ವಾಪಸ್ಸು ತೆಗೆಯುತ್ತಾರೆ ಬಳಿಕ ಕಾಂಗ್ರೆಸ್ಸಿನ ನಾಯಕರು ಹೋಗುತ್ತಾರೆ ಡ್ರೋನ್ ಕ್ಯಾಮರ ಬಿಡ್ತಾರೆ ಮತ್ತೆ ಇದೀಗ ಪೊಲೀಸರನ್ನು ಯಾಕೆ ಹಕ್ತಾರೆ. ಹೀಗಾಗಿ ನಾನು ಜಿಲ್ಲಾಡಳಿತವನ್ನು ನಾನು ಪ್ರಶ್ನಿಸುತ್ತೇನೆ ಪೊಲೀಸರನ್ನು ಹಾಕಲು ಹೇಳಿದವರು ಯಾರು.? ಮತ್ತೆ ಯಾಕೆ ವಾಪಸ್ಸು ತೆಗೆದಿರಿ ನಿನ್ನೆಯಿಂದ ಮತ್ತೆ ಪೊಲೀಸರನ್ನು ಯಾಕೆ ಹಾಕಿದ್ದೀರಿ.? ಮನುಷ್ಯನಿಗೆ ನಿಯತ್ತು ಮತ್ತು ಬದ್ದತೆ ಇರಬೇಕು ಆದರೆ ಉದಯ್ ಕುಮಾರ್ ಶೆಟ್ಟಿಗೆ ಎರಡೂ ಇಲ್ಲ. ನಾವು ಕೊಡುವ ಒಂದೊಂದು ಹೇಳಿಕೆ ಅದು ಪ್ರವಾಸೋದ್ಯಮಕ್ಕೆ ಧಕ್ಕೆಯಾಗುತ್ತದೆ. ನಾವು ಮಾಡುವ ಪ್ರತಿಭಟನೆ ಕಾರ್ಕಳದ ಅಭಿವೃದ್ದಿಗೆ ಧಕ್ಕೆಯಾಗುತ್ತದೆ ಎಂದು ಯಾವತ್ತೂ ಯೋಚನೆಯನ್ನು ಮಾಡಿಲ್ಲ ಅವರು.
ಐದು ಆಗ್ರಹವನ್ನು ಮಾಡುತ್ತೇನೆ ಇದು ಜಿಲ್ಲಾಡಳಿತ ಹಾಗೂ ಸರ್ಕಾರ ಕೇಳಿಸಿಕೊಳ್ಳಬೇಕು. ತಡೆಹಿಡಿದ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಿ. ಥೀಮ್ ಪಾರ್ಕ್ ಬಗ್ಗೆ ಅನುಮಾನಗಳಿದ್ದರೆ ತಕ್ಷಣ ತನಿಖೆ ಮಾಡಿ. ಸ್ಥಗಿತಗೊಂಡ ಕಾಮಗಾರಿಯನ್ನು ತಕ್ಷಣದಲ್ಲಿ ಪ್ರಾರಂಭಮಾಡಿ. ಶೀಘ್ರವಾಗಿ ಪ್ರವಾಸಿಗರಿಗೆ ಮುಕ್ತವಾಗಲಿ. ಸುಳ್ಳು ಅಪಪ್ರಚಾರವನ್ನು ಮಾಡುವವರ ವಿರುದ್ದ ಕ್ರಮವನ್ನು ಕೈಗೊಳ್ಳಿ. ಕಾಮಗಾರಿ, ಅನುದಾನ ಮಂಜೂರು ಮಾಡಲು ತಯಾರಿಲ್ಲದ ಕಾಂಗ್ರೆಸ್ ಮುಂದಿನ ಲೋಕಸಭೆ ಚುನಾವಣೆ ತನಕ ಮುಂದುವರಿಸಿ, ಬಳಿಕ ವಿಗ್ರಹವನ್ನು ಸ್ಥಾಪಿಸಿ ಇದು ಬಿಜೆಪಿಯವರು ಮಾಡಿದಲ್ಲ ನಾವು ಮಾಡಿದ್ದು ಎಂದು ಹೇಳಲು ಹುನ್ನಾರ ಮಾಡುತ್ತಿದೆ. ನಿಮಗೆ ಕಾರ್ಕಳದಲ್ಲಿ ಅಭಿವೃದ್ದಿ ಮಾಡಬೇಕಾದರೆ ಇನ್ನೆಲ್ಲದರೂ ಗುಡ್ದೆಯನ್ನು ಹುಡುಕಿ ಇನ್ನೊಂದು ಪ್ರವಾಸೋದ್ಯಮವನ್ನು ಮಾಡಿ. ಸರ್ಕಾರ ಕಾಮಗಾರಿಯನ್ನು ಮುಂದುವರಿಸಲು ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದಾದರೇ ಬಿಟ್ಟು ಬಿಡಿ ನಾನು ಜನರಲ್ಲಿ ಭಿಕ್ಷೆಯನ್ನು ಬೇಡಿ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇನೆ. ವಿಃನ ಕಾರಣ ರಾಜಕೀಯ ಮಾಡಿಕೊಂಡು ಪ್ರವಾಸೋದ್ಯಮವನ್ನು ಹಾಳು ಮಾಡಬೇಡಿ ಎಂದರು.
ಸಭೆಯಲ್ಲಿ ಮಣಿರಾಜ್ ಶೆಟ್ಟಿ, ಕ್ಷೇತ್ರಧ್ಯಕ್ಷ ಮಹಾವೀರ ಹೆಗ್ಡೆ, ರವೀಂದ್ರ ಕುಮಾರ್, ರೇಷ್ಮಾ ಉದಯ್ ಶೆಟ್ತಿ, ಸುಧೀರ್ ಹೆಗ್ಡೆ, ಸವಿತ ಎಸ್. ಕೋಟ್ಯಾನ್, ಜಯರಾಮ್ ಸಾಲ್ಯಾನ್, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. ನವೀನ್ ನಾಯಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.