ಮಂಗಳೂರು, ಅ 20 (DaijiworldNews/AK): ಅಕ್ರಮ ಮಾದಕ ವಸ್ತು ದಂಧೆಯಲ್ಲಿ ತೊಡಗಿದ್ದ ವ್ಯಕ್ತಿಯೊರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಉಳ್ಳಾಲ ನಿವಾಸಿ ಅಬ್ದುಲ್ ಅಜೀಜ್ ಅಲಿಯಾಸ್ ಪೋಕರ್ ಅಜೀಜ್ (42) ಎಂದು ಗುರುತಿಸಲಾಗಿದೆ.
ಹಲವಾರು ಮಾದಕ ವಸ್ತು ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಜೀಜ್, ಉಳ್ಳಾಲದಲ್ಲಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಎಂಡಿಎಂಎ ಎಂಬ ಮಾದಕ ವಸ್ತು ಮಾರಾಟ ಮಾಡುತ್ತಿದ್ದು ಪತ್ತೆಯಾಗಿದೆ.
ಆತನ ವಶದಿಂದ ಒಟ್ಟು 26 ಗ್ರಾಂ ತೂಕದ 1,30,000 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, ಮಾದಕ ವಸ್ತು ಸಾಗಾಟಕ್ಕೆ ಉಪಯೋಗಿಸಿದ ಕಾರು, ಮೊಬೈಲ್ ಫೋನ್ ಗಳು-2, ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಂಡಿದ್ದಾರೆ.
ವಸ್ತುಗಳ ಒಟ್ಟು ಮೌಲ್ಯ ಸುಮಾರು 6,41,500 ರೂ ಅಂದಾಜಿಸಲಾಗಿದೆ. ಆರೋಪಿಗಳ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮಾದಕ ದ್ರವ್ಯ ಪ್ರಕರಣ ದಾಖಲಾಗಿದೆ. ತನಿಖೆಗಳು ನಡೆಯುತ್ತಿದ್ದು, ಮಾದಕವಸ್ತು ಕಳ್ಳಸಾಗಣೆ ಕಾರ್ಯಾಚರಣೆಯಲ್ಲಿ ಹಲವಾರು ವ್ಯಕ್ತಿಗಳು ಭಾಗಿಯಾಗಿರುವುದು ಕಂಡುಬಂದಿದೆ.
ಅಜೀಜ್ ಈ ಹಿಂದೆ ಉಳ್ಳಾಲ, ಕೊಣಾಜೆ, ಕಾಪು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಏಳು ಮಾದಕ ವಸ್ತು ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ನ್ಯಾಯಾಂಗ ಬಂಧನದಲ್ಲಿದ್ದಾಗ ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.
ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರ ಅವಿರತ ಪ್ರಯತ್ನದಿಂದ ಸಿಸಿಬಿ ಅಧಿಕಾರಿಗಳು ಮತ್ತು ಇಲಾಖೆಯ ಮಾರ್ಗದರ್ಶನದಿಂದ ಡ್ರಗ್ಸ್ ಮಾರಾಟ ಜಾಲ ಬೆಳಕಿಗೆ ಬಂದಿದೆ.