ಕುಂದಾಪುರ, ಅ 20 (DaijiworldNews/HR): ಸ್ವಾತಂತ್ರ್ಯೋತ್ಸವದ ಸುವರ್ಣ ಸಂಭ್ರಮದ ವತಿಯಿಂದ ದೇಶಕ್ಕಾಗಿ ಹೋರಾಡಿದ ದೇಶದ ಸ್ವಾತಂತ್ರ್ಯ ಹೋರಾಟಗಾರರ ಸವಿನೆನಪಿಗಾಗಿ ದೆಹಲಿಯ ಉದ್ಯಾನವನಕ್ಕೆ ಹಳ್ಳಿ ಹಳ್ಳಿಗಳಿಂದ ಮಣ್ಣು ಸಂಗ್ರಹಿಸಉವ ವಿಭಿನ್ನ ಕಾರ್ಯಕ್ರಮ ನನ್ನ ಮಣ್ಣು ನನ್ನ ದೇಶಕ್ಕೆ ಕುಂದಾಪುರದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತಿ, ನೆಹರು ಯುವಕೇಂದ್ರ, ಯುವಜನ ಮತ್ತು ಕ್ರೀಡಾ ಇಲಾಖೆ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಯುಕ್ತಾಶ್ರಯದಲ್ಲಿ ತಾಲೂಕು ಮಟ್ಟದ ನನ್ನ ಮಣ್ಣು ನನ್ನ ದೇಶ ಅಭಿಯಾನ ಕಾರ್ಯಕ್ರಮದಡಿ ಅಮೃತ ಕಳಸ ಯಾತ್ರೆ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ನನ್ನ ಮಣ್ಣು ನನ್ನ ದೇಶ ವಿಭಿನ್ನ ಕಾರ್ಯಕ್ರಮವಾಗಿದ್ದು, ಈ ಮೂಲಕ ಪ್ರತಿಯೊಬ್ಬರೂ ದೇಶ ಪ್ರೇಮ ಬಿಂಬಿಸಲು ಅವಕಾಶ ಕಲ್ಪಿಸುತ್ತದೆ. ನಮ್ಮ ನೆಲದ ಮಣ್ಣು ದೇಶಮಟ್ಟದ ಸ್ವಾತಂತ್ರಯ ನೆನಪಿಸುವ ಉದ್ಯಾನವೊಂದರಲ್ಲಿ ಸ್ಥಾಪನೆಯಾಗುವ ಮೂಲಕ ದೇಶಕ್ಕೆ ಹೆಮ್ಮೆ ತರುತ್ತದೆ ಎಂದವರು ಹೇಳಿದರು.
ಪ್ರತಿಜ್ಞಾವಿಧಿ ಬೋಧಿಸಿದ ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್ ಆರ್ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರತಿಯೊಬ್ಬರನ್ನೂ ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಬೇಕು. ಅಲ್ಲದೇ ಸಂವಿಧಾನ ನಮಗೆ ನೀಡಿದ ಹಕ್ಕುಗಳ ಜೊತೆಗೆ ನಮ್ಮ ಕರ್ತವ್ಯಗಳನ್ನು ಪಾಲಿಸಬೇಕು. ನಮ್ಮ ದೇಶವನ್ನು ರಕ್ಷಣೆ ಮಾಡಲು ಕಣ್ಭಲ್ಲಿ ಕಣ್ಣಿಟ್ಟು ಕಾಯುವ ಪ್ರತಿಯೊಬ್ಬ ಸೈನಿಕನಿಗೂ ನಾವು ಗೌರವ ನೀಡಬೇಕು. ಆ ನಿಟ್ಟಿನಲ್ಲಿ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಪುರಸಭಾ ಮುಖ್ಯಾಧಿಕಾರಿ ಮಂಜುನಾಥ್, ಕುಂದಾಪುರ ತಹಶಿಲ್ದಾರ ಶೋಭಾ ಲಕ್ಷ್ಮೀ, ಕುಂದಾಪುರ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಶಶಿಧರ್, ಮೊದಲಾದವರು ಇದ್ದರು.