ಮಂಗಳೂರು, ಅ 20 (DaijiworldNews/MS): ಕೋಮುಭಾವನೆ ಕೆರಳಿಸಿದ ಆರೋಪದ ಮೇಲೆ ವಿಶ್ವ ಹಿಂದೂ ಪರಿಷತ್ ನಾಯಕ ಶರಣ್ ಪಂಪ್ವೆಲ್, ಕದ್ರಿ ಮೈದಾನದಲ್ಲಿ ನಡೆದ ಶೌರ್ಯ ಜಾಗರಣ ಸಮಾವೇಶದ ಪ್ರಮುಖರು ಹಾಗೂ ಅಂದಿನ ಮುಖ್ಯ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಅವರ ಮೇಲೆ ಕಾಂಗ್ರೆಸ್ ಸರ್ಕಾರದ ಸೂಚನೆ ಮೇರೆಗೆ ರಾಜಕೀಯ ಪ್ರೇರಿತ ದ್ವೇಷದ ಪ್ರಕರಣ ದಾಖಲಾಗಿರುವುದು ಖಂಡನೀಯ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ನವರಾತ್ರಿ ಸಂದರ್ಭದಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಸುತ್ತಮುತ್ತಲಿನ ಹಿಂದೂ ಸಮುದಾಯದ ಮಾಲೀಕತ್ವದ ಅಂಗಡಿಗಳ ಮೇಲೆ ಕೇಸರಿ ಧ್ವಜಗಳನ್ನು ಇಟ್ಟಿದ್ದು, ಅಂತಹ ಅಂಗಡಿಗಳನ್ನು ಪ್ರೋತ್ಸಾಹಿಸುವಂತೆ ಕರೆ ನೀಡಿದ್ದು ಯಾವ ಮಹಾಪರಾಧ? ಹಿಂದೂ ಸಮಾಜವನ್ನು ಸದಾ ಕಾಲ ಜಾಗೃತ ಸ್ಥಿತಿಯಲ್ಲಿಡುವ ನಿಟ್ಟಿನಲ್ಲಿ ಸಾಮಾಜಿಕ ಚಟುವಟಿಕೆಗಳು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದೇ ರೀತಿಯ ಕಾರ್ಯಕ್ರಮ ಕದ್ರಿ ಮೈದಾನದಲ್ಲಿಯೂ ನಡೆದಿದೆ. ಅದು ಯಾವ ಘನಘೋರ ಅಪರಾಧ? ಇಲ್ಲಿ ಕಲ್ಲುಗಳಿಂದ ಹೊಡೆಯಲು ಹೇಳಿಲ್ಲ, ಬಾಂಬ್ ಸ್ಪೋಟಿಸಲು ಹೇಳಿಲ್ಲ. ಆದರೂ ಸಹ ಪ್ರಕರಣ ದಾಖಲಾಗಿರುವುದು ಕಾಂಗ್ರೆಸ್ ಸರ್ಕಾರದ ದ್ವೇಷ ರಾಜಕೀಯದ ದ್ಯೋತಕ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲ ಈ ರೀತಿಯ ಜಾಗೃತಿ ಕಾರ್ಯಗಳನ್ನು ನಡೆಸುವ ಹಿಂದೂ ನಾಯಕರ ಮೇಲೆ ನಿರಂತರವಾಗಿ ಕೇಸುಗಳ ಮೇಲೆ ಕೇಸುಗಳನ್ನು ದಾಖಲಿಸಿ ಹೆದರಿಸುವ ಪ್ರಯತ್ನ ಮಾಡುತ್ತಲೇ ಬಂದಿದೆ. ಆದರೆ ಇಂತಹ ಬೆದರಿಕೆಗಳನ್ನೆಲ್ಲ ಎದುರಿಸಿ ಹಿಂದೂ ಸಮಾಜ ಇನ್ನಷ್ಟು ಬಲಿಷ್ಠವಾಗಿ ನಿಂತಿದೆ.
ಇತಿಹಾಸ ಪ್ರಸಿದ್ಧ ಕದ್ರಿ ದೇವಸ್ಥಾನಕ್ಕೆ ಕುಕ್ಕರ್ ಬಾಂಬ್ ಇಡಲು ಬಂದಿದ್ದ ಉಗ್ರರನ್ನು, ರಾಜ್ಯದ ವಿವಿಧ ಭಾಗಗಳಲ್ಲಿ ಎನ್.ಐ.ಎ. ಬಲೆಗೆ ಬಿದ್ದ ಶಂಕಿತ ಭಯೋತ್ಪಾದಕರನ್ನು, ಇಸ್ರೇಲ್ ಮೇಲೆ ದಾಳಿ ಮಾಡಿದ ಹಮಾಸ್ ಉಗ್ರರನ್ನು, ಶಿವಮೊಗ್ಗದಲ್ಲಿ ಹಿಂದೂಗಳ ಮೇಲೆ ದಾಳಿ ಮಾಡಿದ ಅವರ "ಬ್ರದರ್ಸ್" ಗಳನ್ನು, ಅಮಾಯಕರು ಎಂದು ಕರೆಯುವ ಕಾಂಗ್ರೆಸ್, ಹಿಂದೂ ನಾಯಕರು ಹಿಂದೂಗಳ ಅಂಗಡಿಗಳ ಮೇಲೆ ಕೇಸರಿ ಧ್ವಜವನ್ನು ಹಾಕಿದರೆ, ಹಿಂದೂ ವ್ಯಾಪಾರರನ್ನು ಪ್ರೋತ್ಸಾಹಿಸಿ ಎಂದು ಕರೆ ನೀಡಿದರೆ ಅದುವೇ ಅಕ್ಷಮ್ಯ ಎಂಬಂತೆ ಪೊಲೀಸರಿಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿರುವುದು ಹಿಂದೂ ವಿರೋಧಿ ನೀತಿಗೆ ಹಿಡಿದ ಕೈಗನ್ನಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.