ಬಂಟ್ವಾಳ, ಅ. 20 (DaijiworldNews/AA/AK): ದನಗಳನ್ನು ಕಡಿದು ಮಾಂಸ ಮಾಡಿದ ಬಳಿಕ ಉಳಿದ ತ್ಯಾಜ್ಯ ವಸ್ತುಗಳನ್ನು ರಸ್ತೆ ಬದಿಯಲ್ಲಿ ಎಸೆದು ಹೋಗಿರುವ ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಕೆಲಿಂಜ ಬಸ್ ನಿಲ್ದಾಣದ ಬಳಿ ನಡೆದಿದೆ.
ರಸ್ತೆಯ ಬದಿಯಲ್ಲಿ ದನದ ಬೇರೆ ಬೇರೆ ಭಾಗವನ್ನು ಎಸೆದು ಹೋಗಿದ್ದು, ಇದನ್ನು ನೋಡಿದ ಸ್ಥಳೀಯರು ಗ್ರಾ.ಪಂ.ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಗ್ರಾ.ಪಂ.ಸದಸ್ಯರು ವಿಟ್ಲ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ವಿಟ್ಲ ಪೋಲಿಸರು ಭೇಟಿ ನೀಡಿ ತ್ಯಾಜ್ಯ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೇಲ್ನೋಟಕ್ಕೆ ದನಗಳ ಕೈ ಕಾಲು, ಚರ್ಮ, ಹಲ್ಲು, ತಲೆಯ ಭಾಗ ಪತ್ತೆಯಾಗಿದೆ.
ಹೆಚ್ಚಿನ ಮಾಹಿತಿ ಪೊಲೀಸರ ತನಿಖೆ ಬಳಿಕವಷ್ಟೇ ತಿಳಿಯಬೇಕಿದೆ.ಇಂತಹ ಸಮಾಜಘಾತುಕ ಕಾರ್ಯವನ್ನು ಯಾರು ಮಾಡುತ್ತಿದ್ದಾರೆ ಎಂಬುದರ ತನಿಖೆ ಮಾಡುತ್ತೇವೆ, ಅಂತಹವರ ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಭರವಸೆಯನ್ನು ಪೋಲೀಸರು ನೀಡಿದ್ದಾರೆ.
ಇನ್ನು ಈ ಸ್ಥಳದಲ್ಲಿ ಇದು ಮೊದಲ ಬಾರಿ ಎಸೆದು ಹೋಗಿರುವ ಪ್ರಸಂಗ ಅಲ್ಲ. ಅನೇಕ ಬಾರಿ ಇದೇ ರೀತಿ ತ್ಯಾಜ್ಯವನ್ನು ಎಸೆದು ಹೋಗಿದ್ದಾರೆ. ಇಂತಹ ಘಟನೆಗಳು ಅಶಾಂತಿಗೆ ಕಾರಣವಾಗಬಹುದು ಹೀಗಾಗಿ ಗ್ರಾಮಪಂಚಾಯತ್ ಅಲ್ಲಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸುವ ಕಾರ್ಯ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.