ಮಂಗಳೂರು, ಅ 19 (DaijiworldNews/MS): ಬೆಳ್ತಂಗಡಿಯ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ದೌರ್ಜನ್ಯಕ್ಕೀಡಾದ ಬಡಕುಟುಂಬದ ಪರ ನಿಂತ ಶಾಸಕ ಹರೀಶ್ ಪೂಂಜಾ ಅವರ ಮೇಲೆಯೇ ಸರ್ಕಾರ, ತನ್ನ ಅಧಿಕಾರಿಗಳ ಮುಖಾಂತರ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಆಕ್ರೋಶ ವ್ಯಕ್ತಪಡಿಸಿದರು.
"ಇಲ್ಲಿ ಬಡವರು ಕಟ್ಟಿಕೊಂಡ ಮನೆಯನ್ನು ತೆರವುಗೊಳಿಸುವ ಮೊದಲು ನ್ಯಾಯಯುತವಾಗಿ ಅಳತೆ ಮಾಡಿಸಿ. ಅದು ಅರಣ್ಯ ಪ್ರದೇಶವಾಗಿದ್ದರೆ ತೆರವುಗೊಳಿಸಿ, ಅಲ್ಲದಿದ್ದರೆ ತೆರವುಗೊಳಿಸಬೇಡಿ" ಎಂದು ಹೇಳಿದ್ದರಲ್ಲಿ ತಪ್ಪೇನಿದೆ.? ಅರಣ್ಯಾಧಿಕಾರಿಗಳಿಂದ ತನ್ನ ಕ್ಷೇತ್ರದ ಬಡ ಕುಟುಂಬಕ್ಕೆ ಆಗುತ್ತಿದ್ದ ದೌರ್ಜನ್ಯವನ್ನು ಪ್ರಶ್ನಿಸುವ ಹಕ್ಕು ಸಂವಿಧಾನಬದ್ಧವಾಗಿ ಕ್ಷೇತ್ರದ ಶಾಸಕನಾದವರಿಗೆ ಇದೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರದಲ್ಲಿ ಆ ಹಕ್ಕಿಗೆ ಅಡ್ಡಿ ಉಂಟು ಮಾಡುತ್ತಿರುವುದು ಸರ್ವಾಧಿಕಾರಿ ಧೋರಣೆಯ ಪ್ರತೀಕ. ಪ್ರಜಾಪ್ರಭುತ್ವದಲ್ಲಿ ಇದು ಬಹಳ ದಿನ ನಡೆಯುವುದಿಲ್ಲ ಎಂದರು.
ಹಮಾಸ್ ಉಗ್ರರ ಬೆಂಬಲಕ್ಕೆ ನಿಲ್ಲುವ ಮತಿಹೀನ ಕಾಂಗ್ರೆಸ್ ಪಕ್ಷದಿಂದ ಇದಕ್ಕಿಂತ ಬೇರೆ ರೀತಿಯ ಆಡಳಿತ ನಿರೀಕ್ಷಿಸಲು ಸಾಧ್ಯವೇ? ಬೇರೆ ದೇಶದ ಉಗ್ರರ ಪರ ಕಣ್ಣೀರು ಸುರಿಸುವ ಇವರಿಗೆ ಇಲ್ಲಿನ ಬಡ ಕುಟುಂಬಗಳ ರೋಧನೆ ಕಾಣುತ್ತಿಲ್ಲ. ಕಳೆದ 75 ವರ್ಷಕ್ಕಿಂತ ಹಿಂದಿನಿಂದಲೂ ಯಾವುದೇ ಸಮಸ್ಯೆ ಇಲ್ಲದೇ ಇಲ್ಲಿಯೇ ಬದುಕು ನಡೆಸಿದ್ದ ಹಿರಿಯ ಬಡ ಜೀವಗಳನ್ನು ಕಾಂಗ್ರೆಸ್ ಸರ್ಕಾರ ಏಕಾಏಕಿ ಒಕ್ಕಲೆಬ್ಬಿಸುವುದು ನ್ಯಾಯಯುತವಾದುದಲ್ಲ ಎಂದರು.
ಅಧಿಕಾರಿಗಳು ಕಾನೂನನ್ನು ಮೀರಿ ಸರ್ಕಾರವನ್ನು ಖುಷಿ ಪಡಿಸುವುದನ್ನು ಬಿಟ್ಟು ಕಾನೂನು ಪ್ರಕಾರ ಜನಪರ ಕಾರ್ಯ ನಿರ್ವಹಿಸಬೇಕು ಎಂದು ಎಚ್ಚರಿಸಿ, ಬಡ ಜನರ ನ್ಯಾಯಯುತ ಹೋರಾಟಕ್ಕೆ ಬೆಂಬಲ ನೀಡಿದ ಶಾಸಕ ಹರೀಶ್ ಪೂಂಜಾರವರ ಮೇಲೆ ದಾಖಲಾಗಿರುವ ರಾಜಕೀಯ ಪ್ರೇರಿತ ಪ್ರಕರಣವನ್ನು ಈ ಕೂಡಲೇ ಕೈಬಿಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.