ಕಾರ್ಕಳ, ಅ 19 (DaijiworldNews/MS): ನಕಲಿ ನಂಬರ್ ಪ್ಲೇಟ್ ಹಾಗೂ ಗ್ಲಾಸ್ ಗೆ ಟಿಂಟ್ ಕಾರೊಂದಕ್ಕೆ ಅಳವಡಿಸಿ, ದುಷ್ಕೃತ್ಯ ನಡೆಸಲು ಸಂಚು ರೂಪಿಸುತ್ತಿದ್ದ ವ್ಯಕ್ತಿಯೋರ್ವನನ್ನು ಕಾರ್ಕಳ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿಟ್ಟೆ ಗ್ರಾಮದ ಬೋರ್ಗಲ್ ಗುಡ್ಡೆ ನಿವಾಸಿ ಉಮ್ಮರ್ ಫಾರೂಕ್ ಪೊಲೀಸರು ವಶಕ್ಕೆ ಪಡೆದ ಆರೋಪಿಯಾಗಿದ್ದಾನೆ. ಈತ ಅ. 16ರಂದು ಕಾರಿನಲ್ಲಿ ತೆರಳುತ್ತಿದ್ದಾರೆ. ಬೈಲೂರು ಪರಶುರಾಮ ಥೀಮ್ ಪಾರ್ಕ್ ಬಳಿ ರೌಂಡ್ಸ್ ಕರ್ತವ್ಯದಲ್ಲಿದ್ದ ಪೊಲೀಸರು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ನಕಲಿ ನಂಬರ್ ಪ್ಲೇಟ್ ಅಳವಡಿಸಿರುವುದು ಹಾಗೂ ಗ್ಲಾಸ್ಗಳಿಗೆ ಟಿಂಟ್ ಅಳವಡಿಸಿಕೊಂಡಿರುವುದು ಬೆಳಕಿಗೆ ಬಂದಿತ್ತು. ಮಾತ್ರವಲ್ಲದೇ ಯಾವುದೋ ದುಷ್ಕೃತ್ಯವೆಸಗುವ ದುರುದ್ದೇಶದಿಂದ ಉಮ್ಮರ್ ಫಾರೂಕ್ ಮತ್ತವರ ಸಹಚರರು ಸಂಚು ರೂಪಿಸುತ್ತಿದ್ದರು ಎನ್ನುವುದು ತನಿಖೆ ವೇಳೆ ತಿಳಿದು ಬಂದಿತ್ತು
ಮಂಗಳೂರಿನ ಧೀರಜ್ ಮತ್ತು ಪ್ರೀತಮ್ರ ಸಹಕಾರದೊಂದಿಗೆ ಕೃತ್ಯವೆಸಗಿರುವುದು ತನಿಖೆಯಿಂದ ತಿಳಿದು ಬಂದಿದ್ದು ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.
ಈತನ ವಿರುದ್ದ ಡ್ರಗ್ಸ್, ಕಳ್ಳತನ, ದರೋಡೆ, ಗೋಕಳ್ಳತನ ಸಹಿತ ವಿವಿಧ ಸಮಾಜ ದ್ರೋಹಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಬಗ್ಗೆ ಹಲವು ಆರೋಪಗಳಿದ್ದು, ಶಿರ್ವ ಸಹಿತ ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣಗಳು ಈ ಹಿಂದೆ ದಾಖಲಾಗಿವೆ.