ಪುತ್ತೂರು, ಅ 19 (DaijiworldNews/MS): ಮಾಣಿ - ಮೈಸೂರು ಹೆದ್ದಾರಿಯ ಪುತ್ತೂರಿನ ಬೈಪಾಸ್ ರಸ್ತೆಉರ್ಲಂಡಿ ಬಳಿ, ಮಂಗಳೂರುನಿಂದ ಸುಳ್ಯದ ಕಡೆಗೆ ಪಾಮ್ ಆಯಿಲ್ ಸಾಗಾಟ ಮಾಡುತ್ತಿದ್ದ ಟ್ಯಾಂಕರೊಂದು ಪಲ್ಟಿಯಾಗಿ ಪಾಮ್ ಆಯಿಲ್ ಸೋರಿಕೆ ರಸ್ತೆಯಲ್ಲೆಲ್ಲಾ ಹರಿದು ಹೋದ ಘಟನೆ ಅ.18ರ ರಾತ್ರಿ ನಡೆದಿದೆ.
ರಾತ್ರಿ 10.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು ಟ್ಯಾಂಕರ್ ಉರುಳಿಬಿದ್ದ ತಕ್ಷಣ ಸ್ಥಳೀಯರು ಆಗಮಿಸಿ, ಇತರರಿಗೆ ಎಚ್ಚರಿಸಿ ರಸ್ತೆಯಲ್ಲಿ ಆಯಿಲ್ ಚೆಲ್ಲಿರುವುದರಿಂದ ಮುಂದಾಗಬಹುದಾದ ಅನಾಹುತ ತಪ್ಪಿಸಿದರು.
ಘಟನೆಯಿಂದ ವಿದ್ಯುತ್ ತಂತಿ ತುಂಡರಿಸಲ್ಪಟ್ಟಿದ್ದು ಸಂಪರ್ಕ ಕಡಿತಗೊಂಡಿದೆ. ಟ್ಯಾಂಕರ್ ವಿದ್ಯುತ್ ಕಂಬ, ತಂತಿಗಳಿಗೆ ತಾಗಿದ್ದರೂ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಕಾರೊಂದಕ್ಕೆ ಅಪಘಾತವಾಗುವುದನ್ನು ತಪ್ಪಿಸುವ ಯತ್ನದಲ್ಲಿ ಟ್ಯಾಂಕರ್ ಪಲ್ಟಿಯಾಗಿದೆ ಎನ್ನಲಾಗಿದೆ. ಟ್ಯಾಂಕರ್ನಲ್ಲಿ 30 ಸಾವಿರ ಲೀ. ಪಾಮ್ ಆಯಿಲ್ ತುಂಬಿಸಲಾಗಿದ್ದು, ಅದರಲ್ಲಿದ್ದ 10 ಸಾವಿರ ಲೀ. ಪಾಮ್ ಆಯಿಲ್ ಸೋರಿಕೆಯಾಗಿ ಹೋಗಿದೆ.
ಘಟನೆಯಲ್ಲಿ ಟ್ಯಾಂಕರ್ ಚಾಲಕನಿಗೆ ಗಾಯವಾಗಿದ್ದು ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಅವರು ಗಾಯಾಳು ಚಾಲಕನನ್ನು ತಮ್ಮ ಕಾರಿನಲ್ಲಿ ಕರೆದೊಯ್ದು ಮಹಾವೀರ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಅಗ್ನಿ ಶಾಮಕ ದಳದವರು ಹಾಗೂ ಮೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಮುನ್ನೆಚ್ಚರಿಕಾ ಕ್ರಮಕೈಗೊಂಡಿದ್ದಾರೆ.