ಕುಂದಾಪುರ, ಅ 18 (DaijiworldNews/HR): ಪ್ರಯಾಣಿಕರ ಆಕ್ಷೇಪಗಳ ನಡುವೆಯೂ ನಿರ್ಲಕ್ಷ್ಯ ತೋರಿದ ಚಾಲಕನ ಅತೀ ವೇಗದಿಂದ ಖಾಸಗಿ ಬಸ್ ಒಂದು ಹೆದ್ದಾರಿ ನಡುವಿನ ಡಿವೈಡರ್ ನಲ್ಲಿದ್ದ ವಿದ್ಯುತ್ ದೀಪದ ಕಂಬಕ್ಕೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಯಲ್ಲಿ ಪಲ್ಟಿಯಾಗಿ ಹದಿನೈದು ಜನ ಪ್ರಯಾಣಿಕರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅರಾಟೆ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.
ಕುಂದಾಪುರದಿಂದ ಬೈಂದೂರಿಗೆ ಹೋಗುವ ಲೋಕಲ್ ಎಪಿಎಂ ಬಸ್ ಸಂಜೆ ಕುಂದಾಪುರದ ಶಾಸ್ತ್ರೀ ವೃತ್ತದಿಂದ ಹೊರಟಿತ್ತು. ಆರಂಭದಲ್ಲಿಯೇ ಬಸ್ ಚಾಲಕನ ಅತೀ ವೇಗಕ್ಕೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಗಾಯಗೊಂಡ ಪ್ರಯಾಣಿಕರು ಹೇಳಿದ್ದಾರೆ. ಆದರೆ ಚಾಲಕ ನಿರ್ಲಕ್ಷ್ಯ ತೋರಿದ್ದನೆನ್ನಲಾಗಿದೆ. ಕುಂದಾಪುರದಿಂದ ಅಪಘಾತ ನಡೆದ ಸ್ಥಳಕ್ಕೆ ಸುಮಾರು ಎಂಟು ಕಿ.ಮೀ ದೂರವಿದ್ದು ಐದು ಕಡೆ ನಿಲುಗಡೆಯಿದೆ. ಆದರೆ ಚಾಲಕ ನಿಲುಗಡೆ ಸೇರಿ ಕೇವಲ ಐದು ನಿಮಿಷದಲ್ಲಿ ಕುಂದಾಪುರದಿಂದ ಅಪಘಾತ ನಡೆದ ಸ್ಥಳ ತಲುಪಿದ್ದಾನೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಇತ್ತ ಗಾಯಗೊಂಡ ಸುಮಾರು 15 ಪ್ರಯಾಣಿಕರನ್ನು ಕುಂದಾಪುರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಪೈಕಿ ಒಂಭತ್ತು ತಿಂಗಳ ತುಂಬು ಗರ್ಭಿಣಿಯೂ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದು, ಅವರಿಗೂ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಂಗೊಳ್ಳಿಯ ಆಪತ್ಬಾಂಧವ ಅಂಬ್ಯುಲೆನ್ಸಿನ ಇಬ್ರಾಹಿಂ ಗಂಗೊಳ್ಳಿ ಹಾಗೂ ಬಿಜೆಪಿ ಮುಖಂಡ ಶರತ್ ಶೆಟ್ಟಿ ಉಪ್ಪುಂದ ಅವರು ತಮ್ಮ ಇನ್ನೋವಾ ಕಾರಿನಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ತಪ್ಪಿತಸ್ಥ ಚಾಲಕನ ನಿರ್ಲಕ್ಷ್ಯತನಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಆತನನ್ನು ಬಂಧಿಸಿ ಕ್ರಮಕೈಗೊಳ್ಳುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ. ಗಂಗೊಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.