ಮಂಗಳೂರು, ಅ 18 (DaijiworldNews/MS): ಮಂಗಳೂರಿನಲ್ಲಿ ಅನೇಕ ದಿನಗಳಿಂದ ಇ-ಖಾತಾದ ಸಮಸ್ಯೆ ಉಂಟಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು ಈ ಬಗ್ಗೆ ಕೂಡಲೇ ಕ್ರಮಕೈಗೊಂಡು ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸಿಕೊಡಬೇಕಾಗಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಾದ ಅಜಯ್ ನಾಗಭೂಷಣ್ ರನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಕಳೆದ ಕೆಲವು ತಿಂಗಳುಗಳಿಂದ ಸಾರ್ವಜನಿಕರಿಗೆ ಅಗತ್ಯವಾಗಿ ಬೇಕಿರುವ ಇ-ಖಾತಾ ದಲ್ಲಿ ಸಮಸ್ಯೆ ಸೃಷ್ಟಿಯಾಗಿದ್ದು ಒಂದು ಇ - ಖಾತಾ ಸಿಗಲು ಸುಮಾರು 3 ತಿಂಗಳವರೆಗೆ ಕಾಯಬೇಕಾದ ಪರಿಸ್ಥಿತಿ ಇದ್ದು, ಸಾರ್ವಜನಿಕರು ಪ್ರತಿನಿತ್ಯ ಸರ್ಕಾರಿ ಕಛೇರಿ ಅಲೆಯುವಂತಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಸರ್ವರನ್ನು ಬಿಬಿಎಂಪಿ ಸರ್ವರ್ಗೆ ಲಿಂಕ್ ಮಾಡಿದ ಮೇಲೆ ಈ ಸಮಸ್ಯೆ ಸೃಷ್ಟಿಯಾಗಿ ಅನಗತ್ಯ ಗೊಂದಲಕ್ಕೆ ಆಸ್ಪದವಾಗಿದ್ದು ಕೂಡಲೇ ಇದನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಶಾಸಕರು ಅಗ್ರಹಿಸಿದರು.
ಈ ಬಗ್ಗೆ ಪರಿಶೀಲಿಸಿ ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳು ಹೇಳಿದರು.