ಮಂಗಳೂರು, ಅ 18 (DaijiworldNews/MS): ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನಗರದ ಬೋಂದೆಲ್ ನಲ್ಲಿರುವ ಲೋಕೋಪಯೋಗಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಇಂಜಿನಿಯರ್ ರೊನಾಲ್ಡ್ ಲೋಬೊ ಲಂಚ ಪಡೆದ ಆರೋಪಿಯಾಗಿದ್ದಾರೆ.
ಲೋಕೋಪಯೋಗಿ ಇಲಾಖೆಯ ಕ್ಲಾಸ್ 2 ದರ್ಜೆಯ ಗುತ್ತಿಗೆದಾರ ಪ್ರಭಾಕರ ನಾಯ್ಕ ಎಂಬವರು ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಪರಿಶಿಷ್ಟ ಜಾತಿ ಕಾಲನಿಯ ಎಎನ್ಎಂ ರಸ್ತೆ ಕಾಮಗಾರಿ ಹಾಗೂ ಕರಿಮಣೇಲು ಗ್ರಾಮದ ಕೈರೋಳಿ ಎಂಬಲ್ಲಿನ ಪರಿಶಿಷ್ಟ ಜಾತಿ ಕಾಲನಿಯ ರಸ್ತೆ ಕಾಮಗಾರಿಗಳನ್ನು 45 ಲಕ್ಷ ರೂ. ವೆಚ್ಚದಲ್ಲಿ ಮಾಡಿಸಿದ್ದರು.
ಬಿಲ್ ಪಾವತಿಯಾಗುವುದಕ್ಕೆ ಮೊದಲು ಕ್ವಾಲಿಟಿ ಚೆಕ್ಕಿಂಗ್ ರಿಪೋರ್ಟ್ ಕೊಡಬೇಕಾಗಿತ್ತು. ಈ ಬಗ್ಗೆ ವರದಿ ಕೇಳಲು ಲೋಕೋಪಯೋಗಿ ಇಲಾಖೆಗೆ ಅರ್ಜಿ ಸಲ್ಲಿಸಿದಾಗ ಇಲಾಖೆಯ ಗುಣಮಟ್ಟ ಮತ್ತು ಭರವಸೆ ವಿಭಾಗದ ಇಂಜಿನಿಯರ್ ರೊನಾಲ್ಡ್ ಲೋಬೋ 22 ಸಾವಿರ ರೂ. ಲಂಚ ಕೇಳಿದ್ದರೆನ್ನಲಾಗಿದೆ. ಈ ಬಗ್ಗೆ ಪ್ರಭಾಕರ ನಾಯ್ಕ ನೇರ ಲೋಕಾಯುಕ್ತ ಪೊಲೀಸ್ ಗೆ ದೂರು ನೀಡಿದ್ದರು.
ಲೋಕಾಯುಕ್ತ ಎಸ್ಪಿ ಸಿ.ಎ.ಸೈಮನ್ ಮಾರ್ಗದರ್ಶನದಂತೆ ಡಿವೈಎಸ್ಪಿ ಚೆಲುವರಾಜು ನೇತೃತ್ವದಲ್ಲಿ , ಬುಧವಾರ ಲಂಚದ ಹಣ ಸ್ವೀಕರಿಸುವ ವೇಳೆ ದಾಳಿ ನಡೆಸಿ ರೊನಾಲ್ಡ್ ಲೋಬೋನನ್ನು ಬಂಧಿಸಲಾಗಿದೆ.