ಮಂಗಳೂರು, ಅ 18 (DaijiworldNews/AA): "ಬಿಜೆಪಿ ಮುಖಂಡರಿಗೆ ಆಧಾರ ರಹಿತ ಆರೋಪ ಮಾಡುವುದು ಒಂದು ಚಾಳಿ ಆಗಿದ್ದು, ಪಂಚರಾಜ್ಯ ಚುನಾವಣೆಯಲ್ಲಿ ಸೋಲಿನ ಭೀತಿ ಅವರನ್ನು ಕಾಡತೊಡಗಿದೆ" ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದರು.
ಅ.18ರಂದು ನಗರದಲ್ಲಿ ಮಂಗಳೂರಿನಲ್ಲಿ ಮಾತನಾಡಿದ ಸಚಿವರು, "ಪಂಚರಾಜ್ಯ ಚುನಾವಣೆಗೆ ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಮಾಡಿಕೊಂಡಿದೆ" ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.
"ಪಂಚರಾಜ್ಯ ಚುನಾವಣೆಯಲ್ಲಿ ಸೋಲಿನ ಭೀತಿ ಬಿಜೆಪಿಗೆ ಕಾಡತೊಡಗಿದೆ. ಕರ್ನಾಟಕದಲ್ಲಿ ಬಿಜೆಪಿ ಧೂಳಿಪಟವಾಗಿದೆ.ಕರ್ನಾಟಕದಲ್ಲಿ ಯಾವ ರೀತಿ ಆಡಳಿತ ಕೊಟ್ಟಿದ್ದಾರೆ ಎಂಬುದು ಇಡೀ ದೇಶಕ್ಕೆ ತಿಳಿದಿದೆ. ಕರ್ನಾಟಕವನ್ನ ಯಾವ ರೀತಿ ಎಟಿಎಂಗಿಂತ ಕಡೆಯಾಗಿ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಜನ ನೋಡಿದ್ದಾರೆ. ಪಂಚರಾಜ್ಯದ ಸೋಲಿನ ಭೀತಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆ ಮಸಿ ಬಳಿಯುವ ಯತ್ನ ಮಾಡುತ್ತಿದ್ದು, ಸುಳ್ಳಿನ ಆರೋಪ ಮಾಡುತ್ತಿದ್ದಾರೆ" ಎಂದರು.
"ಐಟಿ, ಸಿಬಿಐ ಎಲ್ಲಾ ಸಂಸ್ಥೆಗಳು ಬಿಜೆಪಿ ಕೈಯಲ್ಲೇ ಇದ್ದು ಈ ಸಂಸ್ಥೆಗಳು ಅವರ ನಿರ್ದೇಶನದಂತೆ ನಡೆಯುತ್ತಿದೆ. ಬಿಜೆಪಿ ಆಡಳಿತ ಸಂದರ್ಭ ಅವರ ಮುಖಂಡರ ಮೇಲೆ ಐಟಿ, ಸಿಬಿಐ ದಾಳಿ ನಡೆಸಿರುವುದನ್ನು ನಾವು ನೋಡಿಲ್ಲ. ಐಟಿ ರೇಡ್ ಬಗ್ಗೆ ಸಿಬಿಐ ತನಿಖೆಗೆ ಅವರು ಒತ್ತಾಯಿಸುತ್ತಿದ್ದಾರೆ. ಸಿಬಿಐಗೆ ಆದಾಯ ತೆರಿಗೆ ಇಲಾಖೆಗೆ ಪ್ರಕರಣವನ್ನು ನೀಡಬೇಕು. ರೇಡ್ ಸಂದರ್ಭ ಯಾರಲ್ಲಿ ಹಣ ಸಿಕ್ಕಿದೆ ಅವರು ಯಾರೂ ಕಾಂಗ್ರೆಸ್ ನವರಲ್ಲ. ಯಾರೇ ತಪ್ಪುಮಾಡಿದರೆ ಅವರ ವಿರುದ್ಧ ಕ್ರಮ ಆಗಲಿ ಅದನ್ನು ಸ್ವಾಗತಿಸುತ್ತೇವೆ" ಎಂದರು.
"ನಮಗೆ ಆಪರೇಷನ್ ಹಸ್ತ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಪಕ್ಷಕ್ಕೆ ಸ್ವಯಂ ಪ್ರೇರಣೆಯಿಂದ ಬಂದರೆ ಅವರ ಜೊತೆ ಮಾತನಾಡಬಹುದು. ಯಾವುದೇ ಪಕ್ಷವನ್ನು ಒಡೆಯುವ ಅವಶ್ಯಕತೆ ನಮಗಿಲ್ಲ. ಜೆಡಿಎಸ್ ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಅಲ್ಲಿನ ಮುಖಂಡರು ಸಮಾಧಾನ ಇಲ್ಲದಿರಬಹುದು, ಹೀಗಾಗಿ ಅವರೂ ನಮ್ಮ ಪಕ್ಷಕ್ಕೆ ಬರಬಹುದು. ರಾಜಕೀಯದಲ್ಲಿ ಈ ರೀತಿಯ ಬೆಳವಣಿಗೆ ಇದ್ದೇ ಇರುತ್ತದೆ. ಆಪರೇಷನ್ ಕಮಲ ಮಾಡಿದವರು ಯಾರು? ಎಷ್ಟು ಕೆಟ್ಟ ರೀತಿಯಲ್ಲಿ ವ್ಯವಸ್ಥೆ ಹಾಳು ಮಾಡಿದರು ಎಂಬುದನ್ನ ಇಡೀ ದೇಶ ನೋಡಿದೆ. ಹಣಕೊಟ್ಟು, ಬೆದರಿಸಿ ಆಪರೇಷನ್ ಮಾಡೋದ್ರಲ್ಲಿ ಬಿಜೆಪಿಗರು ಪರಿಣಿತರು ಎಂದು ಇದೇ ವೇಳೆ ಸಚಿವರು" ಆರೋಪಿಸಿದರು.