ಕಾಸರಗೋಡು, ಅ 18 (DaijiworldNews/MS): ಮಹಿಳೆಯರು ಮನಸ್ಸು ಮಾಡಿದರೆ ಕಷ್ಟಗಳನ್ನು ಎದುರಿಸಿ ಬದುಕಿ ಸಾಧಿಸಬಲ್ಲಳು ಎಂಬುವುದಕ್ಕೆ ಕಾಸರಗೋಡು ಜಿಲ್ಲೆಯ ವಾಣಿನಗರ ನಿವಾಸಿಯಾಗಿರುವ ಹರಿಣಾಕ್ಷಿಯವರೇ ಸಾಕ್ಷಿ. ಜೀವನದಲ್ಲಿ ಕಷ್ಟಗಳ ಸರಮಾಲೆ ಬಂದಾಗ ಮಾನಸಿಕವಾಗಿ ಕುಗ್ಗುವ ಬದಲು ಅದನ್ನೇ ಸವಾಲಾಗಿ ಸ್ವೀಕರಿಸಿ ಬದುಕು ಕಟ್ಟಿಕೊಂಡವರು ಹರಿಣಾಕ್ಷಿ.
ಮೂಲತ ಮಡಿಕೇರಿ ನಿವಾಸಿಯಾಗಿರುವ, ಸದ್ಯ ಕಾಸರಗೋಡು ಜಿಲ್ಲೆಯ ವಾಣಿನಗರ ನೆಲೆಸಿರುವ ಹರಿಣಾಕ್ಷಿಆಯುರ್ವೇದ ಥೆರಪಿ ಕಲಿತಿದ್ದು, ಅದೇ ವೃತ್ತಿಯನ್ನು ಚೆನ್ನೈ ಮತ್ತು ಬೆಂಗಳೂರಿನಲ್ಲಿ ತನ್ನ ಪತಿಯೊಂದಿಗೆ ನಿರ್ವಹಿಸಿಕೊಂಡಿದ್ದರು. ಆದರೆ ಮಕ್ಕಳಾದ ಬಳಿಕ ಆ ಕೆಲಸವನ್ನು ನಿರ್ವಹಿಸುವುದು ಅಸಾಧ್ಯವಾದಾಗ ದಂಪತಿಗಳು ತಮ್ಮ ಊರಿಗೆ ಮರಳಿ ಬಂದಿದ್ದರು. ಗಂಡ ತಿರುಗಿ ಬೆಂಗಳೂರಿಗೆ ಹೋದರೆ ಹೆಂಡತಿ ಊರಲ್ಲೇ ಇದ್ದು ಎರಡು ಮಕ್ಕಳನ್ನ ಸಾಕಬೇಕಾದ ಅನಿವಾರ್ಯತೆಗೆ ಒಳಗಾಗುತ್ತಾರೆ.
ಮತ್ತೆ ಹಿಂತಿರುಗಿ ಬರುತ್ತೇನೆ ಎಂದ ಪತಿ ಬರದೇ ಇದ್ದಾಗ ಕುಟುಂಬ ಪೊರೆಯುವ ಪೂರ್ತಿ ಜವಾಬ್ದಾರಿ ಇವರದ್ದೇ ಆಗುತ್ತದೆ. ಮುಂದಿನ ದಾರಿ ತೋಚದೆ ಕಂಗೆಟ್ಟಾಗ ಕುಟುಂಬ ಪೊರೆಯುವ ಪೂರ್ತಿ ಜವಾಬ್ದಾರಿ ತಮ್ಮ ಮೇಲಿದೆ ಎಂಬ ಅರಿವಾಗಿ ಹೊಸ ದಾರಿ ಹುಡುಕುತ್ತಾರೆ. ಮನೆ ಮನೆಗೆ ತೆರಳಿ ಕೂಲಿ ಕೆಲಸ ಮಾಡಿ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಮನೆ ನಿರ್ವಹಣೆಯಲ್ಲಿ ತೊಡಗುತ್ತಾರೆ.
ಕೂಲಿಯ ಜೊತೆಗೆ ಕೆಲವು ಮನೆಗಳಲ್ಲಿ ತೆಂಗಿನಕಾಯಿ ಸುಲಿಯುವ ಕೆಲಸವೂ ಮಾಡುತ್ತಿದ್ದರು. ಒಂದು ಕಾಯಿ ಸುಲಿದರೆ 1 ರೂಪಾಯಿ ಸಿಗುತ್ತದೆ ಎನ್ನುವುದನ್ನು ಅರಿತ ಹರಿಣಾಕ್ಷಿ ಕಾಯಿ ಸುಲಿಯುವುದನ್ನೇ ಅಭ್ಯಾಸ ಮಾಡಿಕೊಂಡರು. ಬಳಿಕ ಗಂಟೆಗೆ 100 ಕಾಯಿಗಳಂತೆ ಸುಲಿಯುವುದಕ್ಕೆ ಆರಂಭಿಸಿದ ಇವರೂ ಕೂಲಿಯಿಂದ ದಿನಕ್ಕೆ ಸಿಗುವ 250 ರೂಪಾಯಿ ಸಂಬಳಕ್ಕಿಂತ ದಿನಕ್ಕೆ 500 ಕಾಯಿ ಸುಲಿದು 500 ರೂಪಾಯಿ ಮಾಡಬಹುದೆಂದು ಲೆಕ್ಕಾಚಾರ ಹಾಕಿ ತೆಂಗಿನಕಾಯಿ ಸುಲಿಯುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡರು.
ಆರ್ಲಪದವಿನಲ್ಲಿರುವ ತೆಂಗಿನ ವ್ಯಾಪಾರಿ ಆಲಿಕುಂಞಿ ಅವರ ಬಳಿ ತೆಂಗಿನಕಾಯಿ ಸುಲಿಯುವ ಕೆಲಸ ಮಾಡುತ್ತೀರುವ ಹರಿಣಾಕ್ಷಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ 1,200 ಕಾಯಿಗಳನ್ನು ಸುಲಿಯುವ ಮೂಲಕ ತಮ್ಮ ಕೈ ಚಳಕವನ್ನು ತೋರಿಸುತ್ತಿದ್ದಾರೆ. ವರ್ಷಕ್ಕೆ ಒಂದರಿಂದ ಎರಡು ತಿಂಗಳ ಕಾಲ ಮಾತ್ರ ಕಾಯಿ ಸುಲಿಯಲು ಕಾಯಿಗಳ ಕೊರತೆ ಬಿಟ್ಟರೆ, ಉಳಿದ ಎಲ್ಲಾ ದಿನಗಳಲ್ಲಿ ಸಾಕಷ್ಟು ಕಾಯಿಗಳು ವ್ಯಾಪಾರಿಯ ಬಳಿ ಹಾಗೂ ಕೆಲವು ಮನೆಗಳಿಗೂ ತೆರಳಿ ತೆಂಗಿನಕಾಯಿ ಸುಲಿಯುವ ಕೆಲಸವನ್ನು ಅಚ್ಚುಕಟ್ಟಾಗಿ ನೆರವೇರಿಸುವಲ್ಲಿ ಯಶಸ್ವಿಯಾಗುವ ಮೂಲಕ ಸೈ ಎನಿಸಿಕೊಂಡಿದ್ದಾರೆ.
ತೆಂಗಿನಕಾಯಿ ಸಿಪ್ಪೆ ಸುಲಿಯುವ ಕಾಯಕದಲ್ಲಿ ಬದುಕು ಕಟ್ಟಿಕೊಂಡಿರುವ ಹರಿಣಾಕ್ಷಿ ಅದೆಷ್ಟೋ ಮಂದಿ ಜೀವನದಲ್ಲಿ ಕುಗ್ಗಿ ಹೋಗಿರುವ ಜನರಿಗೆ ಪ್ರೇರಣೆಯಾಗುದರ ಕಷ್ಟದ ಸಮಯದಲ್ಲಿ ಬದುಕನ್ನು ಹೇಗೆ ನಿರ್ವಹಿಸಬೇಕೆಂದನ್ನು ತಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.