ಫೋಟೋ: ದಯಾ ಕುಕ್ಕಾಜೆ
ಮಂಗಳೂರು, ಅ 17 (DaijiworldNews/HR): ನವರಾತ್ರಿ ಸಮಯದಲ್ಲಿ ದೇವಿಯ ಒಂಬತ್ತು ವಿಧದ ರೂಪಗಳನ್ನು ವಿಶೇಷವಾಗಿ ಆರಾಧಿಸಲಾಗುತ್ತದೆ. ಈ ಬಾರಿ ಮಂಗಳೂರಿನ ಮಾಡೆಲಿಂಗ್ ಜೊತೆಗೆ ನೃತ್ಯದಲ್ಲಿ ಆಸಕ್ತಿ ಹೊಂದಿದ ಮಹಿಳೆಯರ ತಂಡವೊಂದು ನವದುರ್ಗೆಯರ ಅವತಾರ ತಾಳಿ ಅಸುರ ಸಂಹಾರದ ಕಲ್ಪನೆ ಮೂಲಕ ಮಹಿಳಾ ದೌರ್ಜನ್ಯದ ವಿರುದ್ದ ಸಂದೇಶ ಸಾರಿರುವು ವಿಶೇಷ.
ಮಿಸೆಸ್ ಇಂಡಿಯಾ ಮಂಗಳೂರು ವಿಜೇತೆ ಸವಿತಾ ಚೇತನ್ ನೇತೃತ್ವದ ಟೀಂ, ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಖಂಡಿಸಿ ವಿಭಿನ್ನ ಸಂದೇಶದ ಕಲ್ಪನೆಯನ್ನ ಜನರಿಗೆ ತಲುಪಿಸಿರುವುದು ಈ ಬಾರಿಯ ಮಂಗಳೂರು ದಸರಾ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಿದೆ.
ಇನ್ನು ಮಂಗಳೂರಿನ ಮಠದಕಣಿಯಲ್ಲಿ ನವದುರ್ಗೆಯರ ವೇಷ ಧರಿಸಿ ಅಸುರ ಸಂಹಾರ ಕಥೆಯನ್ನ ಮರು ಸೃಷ್ಟಿ ಮಾಡಲಾಗಿದ್ದು, ಶೈಲಾಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕುಷ್ಮಾಂಡಾ, ಸ್ಕಂದಮಾತಾ, ಕಾಳರಾತ್ರಿ, ಕಾತ್ಯಾಯನಿ, ಮಹಾಗೌರಿ ಮತ್ತು ಸಿಧ್ಧಿಧಾತ್ರಿಯಾಗಿ ಮಾಡೆಲಿಂಗ್ ಕ್ಷೇತ್ರದ ಮೂವರು ಹಾಗೂ ಡ್ಯಾನ್ಸ್ ಟೀಂನ ಆರು ಮಹಿಳೆಯರ ತಂಡ ಭಾಗಿಯಾಗಿದೆ.
ನವದುರ್ಗೆಯರಿಗೆ ಮಂಗಳೂರಿನ ಪ್ರಿಯಾ ಬಾಳಿಗಾ ಮೇಕಪ್ ತಂಡ ಬಣ್ಣ ಹಚ್ಚಿದ್ದು, ಸವಿತಾ ಚೇತನ್, ಸಪ್ನಾ, ಮಮತಾ, ಕೀರ್ತಿ, ಶ್ರದ್ದ, ಸೌಮ್ಯಲತಾ, ಶಾರ್ಲೆಟ್, ರಕ್ಷಾ, ಸೌಮ್ಯ ನವದುರ್ಗೆಯರಾಗಿ ಮಿಂಚಿದ್ದು, ಯಕ್ಷಗಾನ ಕಲಾವಿದ ಸಿ.ಕೆ ಪ್ರಶಾಂತ್ ಅವರು ಮಹಿಷಾಸುರನಾಗಿ ಗಮನ ಸೆಳೆದಿದ್ದಾರೆ.
ಸರಸ್ವತಿ ಅರ್ಟ್ಸ್ ಮತ್ತು ಲಲಿತಾ ಕಲಾ ಆರ್ಟ್ಸ್ ವಸ್ತುಗಳನ್ನು ಬಳಸಿ ಅಸುರ ಸಂಹಾರ ಕಲ್ಪನೆ ಮರುಸೃಷ್ಟಿ ಮಾಡಲಾಗಿದ್ದು, ಮಂಗಳೂರು ದಸರಾ ಸಂಭ್ರಮದಲ್ಲಿ ನವದುರ್ಗೆಯರ ಅವತಾರ ತಾಳಿ ಅಸುರ ಸಂಹಾರದ ಕಲ್ಪನೆ ಮೂಲಕ ಮಹಿಳಾ ದೌರ್ಜನ್ಯದ ವಿರುದ್ದ ಸಂದೇಶ ನೀಡಿರುವುದಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.