ಮೂಡುಬಿದಿರೆ, ಅ 17 (DaijiworldNews/HR): ಮೂಡುಬಿದಿರೆ ತಾಲೂಕಿನ ಮಾರ್ಪಾಡಿ ಗ್ರಾಮದ ಅಲಂಗಾರು ಎಂಬಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳುವಾಯಿ ಗ್ರಾಮದ ನವೀದ್ (30), ಪಡುಮಾರ್ನಾಡು ಗ್ರಾಮದ ಉಮೇಶ್ (40), ಪದವು ದರ್ಕಾಸು ನಿವಾಸಿ ಪ್ರಸಾದ್ ದೇವಾಡಿಗ (35) ಬಂಧಿತ ಆರೋಪಿಗಳು.
ನವೀದ್ ಎಂಬಾತ ಪ್ರಸಾದ್ ಮತ್ತು ಉಮೇಶ್ ಎಂಬುವರಿಂದ ಹಣವನ್ನು ಪಡೆದು ಮೊಬೈಲ್ ವೆಬ್ ಸೈಟ್ ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ದಾಳಿ ನಡೆಸಲಾಗಿದೆ.
ಶ್ರೀಲಂಕಾ ಮತ್ತು ಆಸ್ಪ್ರೇಲಿಯಾ ಪಂದ್ಯಕ್ಕೆ ಬೆಟ್ಟಿಂಗ್ ಆಡಲು ಹಣವನ್ನು ಗೂಗಲ್ ಪೇ ಅಥವಾ ಪೋನ್ ಪೇ ಮೂಲಕ ಪಡೆಯುತ್ತಿದ್ದ ಬಗ್ಗೆ ತಿಳಿದುಬಂದಿದೆ. ಬೆಟ್ಟಿಂಗ್ ನಲ್ಲಿ ಬಳಸುತ್ತಿದ್ದ Comfort Zone 247 ಎಂಬ ವೆಬ್ ಸೈಟಸ್ ಅನ್ನು ಮುಂಬೈನಲ್ಲಿರುವ ವ್ಯಕ್ತಿಯೊಬ್ಬ ನಿಯಂತ್ರಣ ಮಾಡುತ್ತಿದ್ದಾನೆಂದು ತಿಳಿದುಬಂದಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ನೆತೃತ್ವದಲ್ಲಿ, ಡಿಸಿಪಿ ಸಿದ್ದಾರ್ಥ ಗೊಯಲ್, ದಿನೇಶ್ ಕುಮಾರ್ ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ಮುಂದಾಳತ್ವದಲ್ಲಿ ಮೂಡುಬಿದಿರೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ, ಸಿಬಂದಿಗಳಾದ ಚಂದ್ರಹಾಸ್ ರೈ, ಮೊಹಮ್ಮದ್ ಹುಸೇನ್, ಅಖೀಲ್ ಅಹ್ಮದ್ ತಂಡ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.