ಉಡುಪಿ,ಏ13(AZM):ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಪ್ರಯುಕ್ತ ಏಪ್ರಿಲ್ 18 ಮತದಾನ ನಡೆಯಲಿದ್ದು, ಮತದಾನ ನಡೆಯುವ 48 ಗಂಟೆಗಳ ಮುಂಚೆ (ಏಪ್ರಿಲ್ 17 ಮತ್ತು 18) ದಿನಪತ್ರಿಕೆ ಸೇರಿದಂತೆ ಯಾವುದೇ ಮುದ್ರಣ ಮಾಧ್ಯಮದಲ್ಲಿ, ರಾಜಕೀಯ ಪಕ್ಷಗಳು, ಮತ್ತು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಪರ ಯಾವುದೇ ಸಂಸ್ಥೆ , ವ್ಯಕ್ತಿಗಳು ಜಾಹೀರಾತು ಪ್ರಕಟಿಸುವ ಮುನ್ನ, ಜಾಹೀರಾತಿನಲ್ಲಿನ ವಿಷಯಗಳ ಕುರಿತು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿರುವ ಮಾದ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣೆ ಸಮಿತಿ(ಎಂಸಿಎಂಸಿ) ಯ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆದು ಪ್ರಕಟಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಪೂರ್ವಾನುಮತಿ ಇಲ್ಲದೇ ಪ್ರಕಟಿಸಿದ ಜಾಹೀರಾತುಗಳ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಇಂದು ಉಡುಪಿಯಲ್ಲಿ ತಿಳಿಸಿದ್ದಾರೆ. ಇಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಇಲ್ಲ: ಆದರೆ, ಏಪ್ರಿಲ್ 16ರಂದು ಸಂಜೆ 6 ಗಂಟೆಯಿಂದ ಏಪ್ರಿಲ್ 18ರ ಸಂಜೆ 6 ಗಂಟೆಯವರೆಗೆ ಟಿವಿ, ವೆಬ್ ಸೈಟ್ ಸೇರಿದಂತೆ ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಹಾಗೂ ಫೇಸ್ ಬುಕ್, ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭ್ಯರ್ಥಿಗಳಿಗೆ ಅಥವಾ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಮತಯಾಚನೆ ಸೇರಿದಂತೆ ಯಾವುದೇ ಚುನಾವಣಾ ಜಾಹೀರಾತುಗಳನ್ನು ಹಾಕುವುದನ್ನು ನಿಷೇಧಿಸಲಾಗಿದೆ. ಇಂತಹ ಜಾಹೀರಾತು ಅಥವಾ ಸಂದೇಶ ಹಾಕುವವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.
ಲೋಕಸಭಾ ಚುನಾವಣೆ- 144 ಸೆಕ್ಷನ್ ಜಾರಿ
ಲೋಕಸಭಾ ಚುನಾವಣೆ 2019 ಕ್ಕೆ ಸಂಬಂಧಿಸಿದಂತೆ, ಏಪ್ರಿಲ್ 18 ರಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತದಾನ ನಡೆಯಲಿದ್ದು,ಸಾರ್ವಜನಿಕ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಮೂಲಕ , ಮುಕ್ತ ಮತ್ತು ನ್ಯಾಯಯುತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆಯನ್ನು ನಡೆಸುವ ನಿಟ್ಟಿನಲ್ಲಿ , ಕುಂದಾಪುರ, ಉಡುಪಿ, ಕಾಪು, ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ , ಏಪ್ರಿಲ್ 16 ರಂದು ಸಂಜೆ 6 ಗಂಟೆಯಿಂದ ಏಪ್ರಿಲ್ 19 ರ ಬೆಳಗ್ಗೆ 6 ಗಂಟೆಯವರೆಗೆ ಸೆಕ್ಷನ್ 144 ರಂತೆ ನಿಷೇದಾಜ್ಞೆ ವಿಧಿಸಿ , ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶಿಸಿದ್ದಾರೆ.
ಈ ಸಮಯದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯದೆ, ಯಾವುದೇ ರೀತಿಯ ಸಾರ್ವಜನಿಕ ಮೆರವಣಿಗೆ, ಸಾರ್ವಜನಿಕ ಸಭೆ, ಸಮಾರಂಭ ನಡೆಸುವಂತಿಲ್ಲ, ಸಾರ್ವಜನಿಕ ರಸ್ತೆ, ಬೀದಿ, ಓಣಿ, ಕೇರಿಗಳಲ್ಲಿ , ಸ್ಥಳಗಳಲ್ಲಿ, ಕಟ್ಟಡ ಮತ್ತು ಮತದಾನ ಕೇಂದ್ರಗಳ ಸುತ್ತಮುತ್ತ 5 ಅಥವಾ ಅದಕ್ಕಿಂತ ಹೆಚ್ಚು ಸೇರುವುದನ್ನು, ಗುಂಪು ಗೂಡುವುದನ್ನು ನಿಷೇಧಿಸಿದೆ.
ನಿಷೇಧಾಜ್ಞೆ ಜಾರಿಯಾದ ಕೂಡಲೇ ಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷಗಳ ಕಾರ್ಯಕರ್ತರು, ತಾರಾ ಪ್ರಚಾರಕರು ಮತ್ತು ಇತರೆ ಕಾರ್ಯಕರ್ತರು ಲೋಕಸಭಾ ಕ್ಷೇತ್ರ ಬಿಟ್ಟು ತೆರಳತಕ್ಕದ್ದು.
ಮತದಾನದ ದಿನ ಮತಗಟ್ಟೆಯಿಂದ 200 ಮೀ ಅಂತರದೊಳಗೆ ಯಾವುದೇ ಅಭ್ಯರ್ಥಿಗಳ ಚುನಾವಣಾ ಬೂತ್ ನ್ನು ರಚಿಸಲು ಅವಕಾಸ ಇರುವುದಿಲ್ಲ. 200 ಮೀ ಅಂತರದಲ್ಲಿ ಚುನಾವಣಾ ಆಯೋಗದ ನಿರ್ದೇಶನದನ್ವಯ 1 ಮೇಜು, 1 ಕುರ್ಚಿ, ಬಿಸಿಲು ಮಳೆಯಿಂದ ರಕ್ಷಣೆಗಾಗಿ ಸಣ್ಣ ಟರ್ಪಾಲುಗಳನ್ನು ಅಳವಡಿಸಿದ ಬೂತ್ ಗಳನ್ನು ಸ್ಥಳೀಯ ಆಡಳಿತದ ಪರವಾನಗಿ ಪಡೆದು ರಚಿಸಬಹುದಾಗಿದೆ.
ಮತಗಟ್ಟೆಯ 100 ಮೀ ಅಂತರದಲ್ಲಿ ಚುನಾವಣಾ ಪ್ರಚಾರ ಮಾಡುವುದನ್ನು ಹಾಗೂ ಧ್ವನಿವರ್ಧಕ ಬಳಸುವುದನ್ನು ನಿಷೇಧಿಸಲಾಗಿದೆ.