ಉಡುಪಿ,ಅ 14 (DaijiworldNews/AK): ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಹಲವಾರು ಅವ್ಯವಹಾರಗಳು ನಡೆದಿದ್ದು, ಸರಕಾರ ಈ ಬಗ್ಗೆ ಹೆಚ್ಚಿನ ಗಮನ ಹರಿಸಲಿದ್ದು, ಇದು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಇಂತಹ ಅವ್ಯವಹಾರಗಳ ವಿರುದ್ಧ ಸರ್ಕಾರ ತಕ್ಷಣ ಕ್ರಮಕೈಗೊಳ್ಳಲಿದೆ ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದರು.
ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು ಇದರಲ್ಲಿ ಸುಮಾರು 15 ಕೋಟಿಯವರೆಗೆ ಅವ್ಯವಹಾರ ನಡೆದಿದೆ ಎಂದು ಹೇಳಲಾಗಿದೆ. ಇದನ್ನು ಸರಿಯಾಗೆ ನೋಡಿದ ಮೇಲೆ ತಿರ್ಮಾನ ತೆಗೆದುಕೊಳ್ಳ ಬಹುದು. ನಾವು ಈಗಾಗಲೆ ಈ ವಿಚಾರವನ್ನು ಮುಖ್ಯ ಮಂತ್ರಿ ಗಮನಕ್ಕೆ ತಂದಿದ್ದೇವೆ. ಪ್ರಕರಣ ತನಿಖೆಗೆ ಆದೇಶ ಮಾಡುವ ಹಂತದಲ್ಲಿ ಇದೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಈ ಬಗ್ಗೆ ನಿರ್ಧಾರಕ್ಕೆ ಬಂದಿದ್ದಾರೆ ಎಂದರು.
ಬ್ರಹ್ಮಾವರದಲ್ಲಿ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಚಿಂತನೆ ನಡೆಸಿದ್ದಾರೆ.ರಾಜ್ಯಾದ್ಯಂತ 15 ವಿವಿಧ ಸ್ಥಳಗಳಲ್ಲಿ ಕೃಷಿ ಕಾಲೇಜುಗಳನ್ನು ಸ್ಥಾಪಿಸುವ ಬೇಡಿಕೆ ಹೆಚ್ಚುತ್ತಿದೆ.ಕೃಷಿ ಕಾಲೇಜು ಸ್ಥಾಪನೆಗೆ ಅಗತ್ಯವಾದ ಸಂಶೋಧನಾ ಕೇಂದ್ರ, ಭೂಮಿ, ಕಟ್ಟಡ ಸೇರಿದಂತೆ ಮೂಲಸೌಕರ್ಯಗಳು ಈಗಾಗಲೇ ಉಡುಪಿಯಲ್ಲಿವೆ.ಕೃಷಿ ಕಾಲೇಜು ಸ್ಥಾಪನೆಗೆ ಉಡುಪಿ ಆಶಾದಾಯಕ ಸ್ಥಳವಾಗಿದೆ. ಇದಕ್ಕೆ ಅನುಕೂಲವಾಗುವಂತೆ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರದೊಂದಿಗೆ ಹೆಚ್ಚಿನ ಚರ್ಚೆ ನಡೆಸಲಾಗುವುದು” ಎಂದರು.
ಲೋಡ್ ಶೆಡ್ಡಿಂಗ್ ಸಮಸ್ಯೆ
ವಿದ್ಯುತ್ ಉತ್ಪಾದನೆಯಲ್ಲಿ ಗಮನಾರ್ಹ ಸಮಸ್ಯೆ ಉಂಟಾಗಿದೆ. ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಲೋಡ್ ಶೆಡ್ಡಿಂಗ್ ಸಮಸ್ಯೆಯನ್ನು ಶೀಘ್ರ ಸರಿಪಡಿಸುತ್ತೇವೆ. ಹೊರ ಜಿಲ್ಲೆಯಿಂದ ವಿದ್ಯುತ್ ಖರೀದಿ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ದುಬಾರಿಯಾದರೂ ವಿದ್ಯುತ್ ಖರೀದಿ ಮಾಡಲೇಬೇಕಾಗುತ್ತದೆ” ಎಂದರು.
ಐಟಿ ದಾಳಿ ವಿಚಾರ
ಐಟಿ ದಾಳಿ ವಿಚಾರದಲ್ಲಿ ಮಾತನಾಡಿದ ಅವರು , ದಾರಿಯಲ್ಲಿ ಹಣ ಸಿಕ್ಕಿದ್ದಕ್ಕೆ ಯಾರೆಲ್ಲಾ ಈವರೆಗೆ ರಾಜೀನಾಮೆ ಕೊಟ್ಟಿದ್ದಾರೆ. ಯಾರದ್ದೋ ಮನೆಯಲ್ಲಿ ದುಡ್ಡು ಸಿಕ್ಕರೆ, ಕಾಂಗ್ರೆಸ್ನವರು ರಾಜೀನಾಮೆ ಕೊಡೋದಕ್ಕೆ ಅಗುತ್ತದಾ?ನಳಿನ್ ಕುಮಾರ್ ಕಟೀಲ್ ಗೆ ಮಾತನಾಡುವುದೇ ಚಪಲ. ದುಡ್ಡು ಯಾರದ್ದು ಎಂದು ತನಿಖೆ ಆಗುತ್ತದೆ, ಅವರ ಮೇಲೆ ಕ್ರಮ ಆಗುತ್ತದೆ ಎಂದರು. ಬಿಜೆಪಿ ಸರ್ಕಾರದಲ್ಲಿ ಯಾರ್ಯಾರದ್ದು ಎಷ್ಟೆಷ್ಟು ದುಡ್ಡು ಎಲ್ಲೆಲ್ಲಿತ್ತು ಎಂಬ ಬಗ್ಗೆ ಗೊತ್ತಿದೆ. ದುಡ್ಡು ಸಿಕ್ಕ ಬಿಜೆಪಿಯವರು ರಾಜೀನಾಮೆ ಕೊಟ್ಟಿದ್ದಾರೇ ಎಂದು ಪ್ರಶ್ನಿಸಿದರು. ಈಶ್ವರಪ್ಪ ಮತ್ತು ಕಟೀಲ್ ಅಣ್ಣತಮ್ಮಂದಿರು ಆ ಇಬ್ಬರ ಮಾತಿಗೆ ಬೆಲೆ ಕೊಡಬೇಕಾಗಿಲ್ಲ ಎಂದು ಖಾರವಾಗಿ ಹೇಳಿದರು.
ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರ
ಬಿಜೆಪಿ ಜೆಡಿಎಸ್ ಮೈತ್ರಿ ಕುರಿತು ಲೇವಡಿ ಮಾಡಿದ ಚೆಲುವರಾಯಸ್ವಾಮಿ “ಕಾಂಗ್ರೆಸ್ ಜೆಡಿಎಸ್ ಹಿಂದೆ ದೋಸ್ತಿ ಮಾಡಿಕೊಂಡಿದ್ದೆವು. ಬಿಜೆಪಿಯವರಿಗೆ ಈಗ ಒಂದು ಹೊಸ ಅನುಭವ. ಬಿಜೆಪಿ ಜೆಡಿಎಸ್ ನಡುವೆ ಹಿಂದಿನ ಕಹಿ ಅನುಭವ ಇದೆ. ಕುಮಾರಸ್ವಾಮಿ ಅವರ ತಂದೆಯ ಮಾತನ್ನು ಕೇಳದೆ ನಿರ್ಧರಿಸಿದ್ದಾರೆ. ಪಕ್ಷದ ಭಿನ್ನಾಭಿಪ್ರಾಯಗಳನ್ನ ಬದಿಗೊತ್ತಿ ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದರು.
ಈ ಮೈತ್ರಿಯಿಂದ ಬಿಜೆಪಿಗೆ ಉಪಯೋಗ ಇಲ್ಲ ಜೆಡಿಎಸ್ ಗೂ ಉಪಯೋಗ ಇಲ್ಲ. ಪಾರ್ಲಿಮೆಂಟ್ ಚುನಾವಣೆ ಇನ್ನೂ ಕೂಡ ಕಾವೇರಿಲ್ಲ. ಕಾಂಗ್ರೆಸ್ ರಾಜ್ಯದಲ್ಲಿ 20 ಸೀಟು ಪಡೆಯುತ್ತದೆ. ಉಳಿದ ಎಂಟರಲ್ಲಿ ಯಾರಿಗೆ ಎಷ್ಟು ಎಂದು ಅವರೇ ಲೆಕ್ಕ ಹಾಕಿಕೊಳ್ಳಲಿ ಎಂದರು.