ಮಂಗಳೂರು ಎ13(SB): ಲೋಕಸಭಾ ಚುನಾವಣೆಯ ಪ್ರಚಾರಕ್ಕೆಂದು ಕರಾವಳಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಎಲ್ಲಿಯೂ ಹಾಲಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ಶೋಭಾ ಕರಂದ್ಲಾಜೆಯವರ ಹೆಸರು ಉಲ್ಲೇಖ ಮಾಡಿಲ್ಲ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಒಕ್ಕೂಟಗಳ ವಿರುದ್ಧ ತೀವ್ರ ವಾಗ್ಧಾಳಿಯನ್ನು ನಡೆಸಿದ ಮೋದಿಯವರು ಭಾರತೀಯ ಜನತಾ ಪಕ್ಷದಿಂದ ಮಾತ್ರ ಸಧೃಡ ಭಾರತದ ನಿರ್ಮಾಣ ಸಾಧ್ಯವಿದೆ ಎಂದು ಹೇಳಿದರಲ್ಲದೇ, ಕಾಂಗ್ರೆಸ್ ಪಕ್ಷದ ವಂಶ ರಾಜಕಾರಣವು ಭಾರತ ಅಭಿವೃದ್ಧಿಯಲ್ಲಿ ಹಿಂದುಳಿಯಲು ನೇರ ಕಾರಣ ಎಂದು ಆರೋಪಿಸಿದ್ದಾರೆ. ತಾನು ದೇಶದ ಬಲಿಷ್ಟ ಹಾಗೂ ನಿಷ್ಟಾವಂತ ಕಾವಲುಗಾರನಾದುದರಿಂದ ಭಾರತವನ್ನು ಕೊಳ್ಳೆ ಹೊಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇಂತಹ ಕಾವಲುಗಾರನ ಅಗತ್ಯತೆಯನ್ನು ಮನಗಂಡು ಮತದಾರರು ಭಾರತೀಯ ಜನತಾ ಪಕ್ಷಕ್ಕೆ ಮಗದೊಮ್ಮೆ ಅಧಿಕಾರ ನೀಡಬೇಕೆಂದು ಅವರು ವಿನಂತಿಸಿದರು.
ಭಾಷಣದ ಮಧ್ಯೆ ಹಲವು ಬಾರಿ ಭಾರತೀಯ ಸೈನ್ಯ ಹಾಗೂ ಸರ್ಜಿಕಲ್ ಸ್ಟ್ರೈಕ್ ನ ಉಲ್ಲೇಖ ಮಾಡಿದ ಪ್ರಧಾನಿ, ಕಾಂಗ್ರೇಸ್ ಪಕ್ಷ ಸೈನ್ಯದ ತ್ಯಾಗವನ್ನು ಅನುಮಾನದಿಂದ ನೋಡುತ್ತಿದೆ ಹಾಗೂ ಸೇನೆಯ ಮುಖ್ಯಸ್ಥನನ್ನು ಖಳನಾಯಕನಾಗಿ ಚಿತ್ರಿಸುತ್ತಿದೆ ಎಂದು ಹೇಳಿದರು. " ಈ ಮೊದಲು ನಾನು ಹಲವು ಬಾರಿ ಮಂಗಳೂರಿಗೆ ಬಂದಿದ್ದೇನೆ. ಇಲ್ಲಿನ ಜನರಿಂದ ಸ್ವಾಗತ ಹಾಗೂ ಆತ್ಮೀಯತೆಯಿಂದಾಗಿ ಪುಳಕಿತನಾಗಿದ್ದೇನೆ. ಈಗ ಮಗದೊಮ್ಮೆ ತಮ್ಮ ಸೇವೆ ಮಾಡಲು ಅವಕಾಶ ನೀಡಿ ಎಂಬ ವಿನಂತಿಯೊಂದಿಗೆ ಬಂದಿದ್ದೇನೆ. ಮೀನುಗಾರರ ಇಲಾಖೆ ಸ್ಥಾಪಿಸುವುದರೊಂದಿಗೆ ಸಾಮಾನ್ಯ ಜನರಿಗೆ ಪ್ರಯೋಜನಕಾರಿಯಾಗುವ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸಲು ಕಟಿಬದ್ಧನಾಗಿದ್ದೇನೆ" ಎಂದು ಹೇಳಿದ ಮೋದಿ ಕನ್ನಡದಲ್ಲೇ ತಮ್ಮ ಭಾಷಣವನ್ನು ಕೊನೆಗೊಳಿಸಿದರು
ಭಾಷಣದುದ್ದಕ್ಕೂ ಕಾವಲುಗಾರನ ಸಾಮರ್ಥ್ಯ ಹಾಗೂ ಕಾಂಗ್ರೇಸಿನ ಆಡಳಿತಾತ್ಮಕ ವಿಫಲತೆಯ ಬಗ್ಗೆ ಮಾತನಾಡಿದ ಮೋದಿಯವರು ತಪ್ಪಿಯೂ ಮಂಗಳೂರು ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳ ಸಂಸದರ ಹೆಸರನ್ನು ಉಲ್ಲೇಖಿಸಲಿಲ್ಲ. ಭಾಷಣದ ಕೊನೆಗೆ ಸ್ಥಳೀಯ ಅಭ್ಯರ್ಥಿ ಪರ ಮತ ಯಾಚಿಸುವ ವಾಡಿಕೆಯಿದ್ದರೂ ಅವರು ಈ ಬಗ್ಗೆ ಗಮನ ನೀಡದೆ ತಮ್ಮ ಭಾಷಣವನ್ನು ಮುಗಿಸಿದರು.
2018 ರಲ್ಲಿ ನಗರದಲ್ಲಿ ನಡೆದ ಮೋದಿ ಪ್ರಚಾರ ಕಾರ್ಯಕ್ರಮವು ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 8 ಸ್ಥಾನಗಳ ಪೈಕಿ 7 ಸ್ಥಾನಗಳನ್ನು ಬಿಜೆಪಿ ಗೆಲ್ಲಲು ಸಹಾಯಕವಾಗಿತ್ತು. ಅಂದು ಸಾಗರೋಪಾದಿಯಲ್ಲಿ ನೆರೆದ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ ತಮ್ಮ ಭಾಷಣದಲ್ಲಿ ಸ್ಥಳೀಯ ವಿಷಯಗಳನ್ನು ಹಾಗೂ ಅಭ್ಯರ್ಥಿಗಳ ಸಾಮರ್ಥ್ಯವನ್ನು ಉಲ್ಲೇಖಿಸಿದ್ದರು. ಆದರೆ ಇಂದಿನ ಭಾಷಣದಲ್ಲಿ ಮೋದಿ, ಹಾಲಿ ಸಂಸದರ ಹೆಸರನ್ನು ಕಡೆಗಣಿಸಿದ್ದು ರಾಜಕೀಯ ವಿಶ್ಲೇಷಕರಲ್ಲಿ ಹಾಗೂ ಜನರಲ್ಲಿ ಹಲವು ರೀತಿಯ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.