ಬಂಟ್ವಾಳ, ಅ 13 (DaijiworldNews/HR): ಕಳೆದ ಐದು ವರ್ಷಗಳಿಂದ ಅಕ್ರಮ ಮರಳು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರು ಮಂದಿ ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶ ಮೂಲದ ಬಬುಲು ಸಹಾನಿ, ರಾಮ್ ಗೋವಿಂದ ಸಹಾನಿ, ಅಮಿತ್ ಕುಮಾರ್, ಸತ್ಯೇಂದ್ರ ಸಹಾನಿ, ಸೈದಾನ್ ಸಹಾನಿ, ಅಭಯ್ ನಾರಾಯಣ್ ಬಂಧಿತ ಆರೋಪಿಗಳು.
ಪರಂಗಿಪೇಟೆಯಲ್ಲಿ ಅಕ್ರಮ ಮರಳು ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮೂಲದ ಆರು ಮಂದಿಯ ಮೇಲೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ 2017ರಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿಗಳಾದ ಇವರು ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ಊರಿಗೆ ಹೋಗಿ ತಲೆಮರೆಸಿಕೊಂಡಿದ್ದರು.
ಇದೀಗ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ಬಿ.ಹಾಗೂ ಪೋಲಿಸ್ ಉಪನಿರೀಕ್ಷಕರುಗಳಾದ ಹರೀಶ್ ಎಂ.ಆರ್,ಮತ್ತು ಮೂರ್ತಿ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಯೋಗೇಶ್ ಡಿ.ಎಲ್, ವಿಜಯಕುಮಾರ್ ಮಾಹಿತಿ ಸಂಗ್ರಹಿಸಿ ಉಡುಪಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.