ಬೆಳ್ತಂಗಡಿ, ಅ 12 (DaijiworldNews/MS): ಕಳೆಂಜ ಅಮ್ಮಿನಡ್ಕದ ಮೀಸಲು ಅರಣ್ಯ ಪ್ರದೇಶದ ಜಾಗದಲ್ಲಿ ಮನೆಯ ಫೌಂಡೇಷನ್ ಕಿತ್ತೆಸೆದ ಪ್ರಕರಣದಲ್ಲಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ಅವರನ್ನು ಶಾಸಕ ಹರೀಶ್ ಪೂಂಜ ಏಕವಚನದಲ್ಲಿ ಮತ್ತು ಅವಾಚ್ಯವಾಗಿ ನಿಂದಿಸಿದ್ದು, ಈ ಕುರಿತು ಈಗಾಗಲೇ ದೂರು ದಾಖಲಾಗಿದೆ.
ಈ ಘಟನೆಯನ್ನು ಕರ್ನಾಟಕ ರಾಜ್ಯ ವಲಯ ಅರಣ್ಯಾಧಿಕಾರಿಗಳ ಸಂಘ ಬೆಂಗಳೂರು ಖಂಡಿಸಿದೆ.
ಕಳೆಂಜ ಅಮ್ಮಿನಡ್ಕದ ಮೀಸಲು ಅರಣ್ಯ ಪ್ರದೇಶದ ಜಾಗದಲ್ಲಿ ಮನೆಯ ಫೌಂಡೇಷನ್ ಕಿತ್ತೆಸೆದ ಪ್ರಕರಣದಲ್ಲಿ ಬಳಿಕ ಮರು ಮನೆ ನಿರ್ಮಾಣ ಮಾಡಿದ ಪ್ರಕರಣ ಸಂಬಂಧ ಅ.೯ರಂದು ಉಪ್ಪಿನಂಗಡಿ ಅರಣ್ಯಾಧಿಕಾರಿಗಳ ತಂಡ ತೆರವು ಮಾಡಲು ಮುಂದಾದಾಗ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉಪ್ಪಿನಂಗಡಿ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ.ರವರಿಗೆ ಅವ್ಯಾಚ ಶಬ್ದ ಪ್ರಯೋಗಿಸಿದ್ದನ್ನು ಕರ್ನಾಟಕ ರಾಜ್ಯ ವಲಯ ಅರಣ್ಯಾಧಿಕಾರಿ ಸಂಘ ಬೆಂಗಳೂರು ಇವರು ಖಂಡಿಸುವುದಾಗಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಮಂಗಳೂರು ವಿಭಾಗದ ಉಪ್ಪಿನಂಗಡಿ ವಲಯದ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಅಮ್ಮಿನಡ್ಕ ನಿಡ್ಲೆ ವಿಸ್ತೃತ ಬ್ಲಾಕ್-೨ ಮೀಸಲು ಅರಣ್ಯ ಪ್ರದೇಶದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ಹಾಗೂ ಸಿಬ್ಬಂದಿಯವರು ಒತ್ತುವರಿ ತೆರವುಗೊಳಿಸುವ ಸಮಯದಲ್ಲಿ ಬೆಳ್ತಂಗಡಿ ಶಾಸಕರು ಹರೀಶ್ ಪೂಂಜ ಸಾರ್ವಜನಿಕವಾಗಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ಅವರಿಗೆ ಅವಾಚ್ಯ ಶಬ್ದದ ಪ್ರಯೋಗಿಸಿ ನಿಂದಿಸಿರುವುದು ಖಂಡನೀಯ.ಆ ಅವ್ಯಾಚ ಶಬ್ದದ ಬಗ್ಗೆ ಕನಿಷ್ಠ ಸೌಜನ್ಯಕ್ಕಾದರೂ ಕ್ಷಮೆ ವ್ಯಕ್ತಪಡಿಸುವುದು ಶಾಸಕರಿಗೆ ಶೋಭೆ ತರುವಂತಹುದಲ್ಲ.ಈ ಕೃತ್ಯವನ್ನು ಕರ್ನಾಟಕ ರಾಜ್ಯ ವಲಯ ಅರಣ್ಯಾಧಿಕಾರಿಯವರ ಸಂಘ ಬೆಂಗಳೂರು ಸಂಘ ಕಠಿಣ ಶಬ್ದಗಳಲ್ಲಿ ಖಂಡಿಸುತ್ತದೆ. ಅಧಿಕಾರಿಗಳಾಗಲೀ, ಸಾರ್ವಜನಿಕರಾಗಲೀ, ಜನಪ್ರಿತಿನಿಧಿಗಳಾಗಲೀ ಅಥವಾ ಗೌರವಾನ್ವಿತ ಶಾಸಕರುಗಳಾಗಲೀ ಈ ನೆಲದ ಕಾನೂನನ್ನು ಪಾಲಿಸಬೇಕಾಗಿರುತ್ತದೆ. ಕಾನೂನಿಗಿಂತ ಯಾರು ಮಿಗಿಲಾಗಿರುವುದಿಲ್ಲ. ಒಂದು ವೇಳೆ ವಲಯ ಅರಣ್ಯಾಧಿಕಾರಿಗಳು ಏನೇ ಕರ್ತವ್ಯ ಚ್ಯುತಿ ಮಾಡಿದ್ದರೂ ಅದನ್ನು ಕಾನೂನಿನ ವ್ಯಾಪ್ತಿಯಲ್ಲೇ ಬಗೆಹರಿಸಿಕೊಳ್ಳ ಬೇಕಾಗಿರುವುದು ಶಾಸಕರಿಗೆ ತಿಳಿಯದೇ ಇರುವ ವಿಷಯವೇನಲ್ಲ. ಮಾನ್ಯ ಗೌರವನ್ವಿತ ಶಾಸಕರು ಸಾರ್ವಜನಿಕವಾಗಿ ವಲಯ ಅರಣ್ಯಾಧಿಕಾರಿಗೆ ತನ್ನ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಕರ್ತವ್ಯಕ್ಕೆ ಅಡ್ಡಿ ಉಂಟುಮಾಡಿ ಅವಾಚ್ಯವಾಗಿ ನಿಂದಿಸಿರುವುದು ಅವರ ಘನತೆಗೆ ತಕ್ಕದ್ದಾಗಿರುವುದಿಲ್ಲ. ಎಂದು ಪತ್ರಿಕಾ ಪ್ರಕಟನೆಯಲ್ಲಿ ಹೇಳಿದ್ದಾರೆ.