ಬಂಟ್ವಾಳ,ಅ 11 (DaijiworldNews/AK): ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ರೈಲ್ವೇ ನಿಲ್ದಾಣದಲ್ಲಿ ಕಾಮಗಾರಿ ನಿರ್ವಹಿಸುತ್ತಿದ್ದ ಕಾಂಕ್ರೀಟ್ ಮಿಕ್ಸರ್ ಯಂತ್ರವೊಂದು ಚಾಲಕನ ನಿಯಂತ್ರಣ ತಪ್ಪಿ ಪ್ಲಾಟ್ ಪಾರ್ಮ್ ನಿಂದ ಕೆಳಗೆ ರೈಲ್ವೇ ಹಳಿಗೆ ಉರುಳಿ ಬಿದ್ದ ಘಟನೆ ನಡೆದಿದೆ.
ಘಟನೆಯಿಂದ ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅದೃಷ್ಟವಶಾತ್ ರೈಲು ಆ ಸಮಯದಲ್ಲಿ ಬರದೆ ಇದ್ದ ಕಾರಣ ಯಾವುದೇ ಅವಘಡಗಳು ಸಂಭವಿಸಿಲ್ಲ.ರೈಲು ಆಗಮಿಸುವ ಮೊದಲು ಯಂತ್ರವನ್ನು ತೆರವು ಗೊಳಿಸಬೇಕಾದ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನ ಗಜಲಕ್ಷ್ಮೀ ಕ್ರೇನ್ ನವರು ಕಾರ್ಯ ಪ್ರವೃತರಾಗಿ ತೆರವು ಕಾರ್ಯ ನಿರ್ವಹಿಸಿದರು.
ಕೋಟ್ಯಾಂತರ ರೂ ವೆಚ್ಚದಲ್ಲಿ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾರ್ಯಗಳಿಗಾಗಿ ಇತ್ತೀಚೆಗೆ ಶಿಲಾನ್ಯಾಸ ನಡೆದಿದ್ದು, ಇದೀಗ ಕಾಮಗಾರಿ ಆರಂಭವಾಗಿದೆ.
ರೈಲ್ವೆ ಪ್ಲಾಟ್ ಪಾರ್ಮ್ ನ ಸನಿಹದಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ನಡೆಸುವ ಕಂಪೆನಿಯ ಕಾಂಕ್ರೀಟ್ ಮಿಕ್ಸರ್ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡು ಹಳಿಗೆ ಉರುಳಿ ಬಿದ್ದಿರುವುದು ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಬಹಳಷ್ಟು ಎಚ್ಚರಿಕೆಯಿಂದ ಇಂತಹ ಕಾಮಗಾರಿ ನಡೆಯಬೇಕಾಗಿದೆ. ಯಾಕೆಂದರೆ ಇಂತಹ ಸೂಕ್ಷ್ಮ ಜಾಗದಲ್ಲಿ ಕಾಮಗಾರಿ ನಡೆಸುವ ವೇಳೆ ನುರಿತ ಹಾಗೂ ವಿಶೇಷ ಅನುಭವದ ಕಾರ್ಮಿಕರು ಕೆಲಸ ನಿರ್ವಹಿಸಬೇಕಾಗಿದೆ.
ಅಜಾಗರೂಕತೆಯಿಂದ ಕಾಮಗಾರಿ ನಡೆಸಿದ ಸಂದರ್ಭದಲ್ಲಿ ರೈಲು ಅಪಘಾತಕ್ಕೆ ಕಾರಣವಾಗಬಹುದು, ಮತ್ತು ಬಹು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.