ಕುಂದಾಪುರ, ಅ 11 (DaijiworldNews/MS): ಸೇನಾಪುರ ರೈಲ್ವೇ ನಿಲ್ದಾಣದಲ್ಲಿ ಮೂರು ರೈಲ್ವೇ ಟ್ರ್ಯಾಕ್ ಗಳಿರುವುದಲ್ಲದೇ, ರೈಲು ನಿಲುಗಡೆಗೆ ಬೇಕಾದ ಪೂರಕವಾದ ಎಲ್ಲಾ ವ್ಯವಸ್ಥೆಗಳಿದ್ದರೂ ಇಲ್ಲಿ ಎಕ್ಸ್ ಪ್ರೆಸ್ ರೈಲು ನಿಲುಗಡೆಯಾಗುತ್ತಿಲ್ಲ. ಎಕ್ಸ್ ಪ್ರೆಸ್ ರೈಲು ನಿಲುಗಡೆಯಾದರೇ ಇಲ್ಲಿನ ಸುತ್ತಮುತ್ತ ಸುಮಾರು 24 ಗ್ರಾಮದ ಜನರಿಗೆ ಪ್ರಯೋಜನವಾಗಲಿದೆ. ಕಾರಾವಾರ, ಗೋವಾ, ರತ್ನಗಿರಿ, ಮುಂಬೈ, ಹಾಸನ , ಮೈಸೂರು, ಬೆಂಗಳೂರು ಹಾಗೂ ಕೇರಳ ರಾಜ್ಯದ ನಗರಗಳಲ್ಲಿ ವಾಸವಿರುವವರಿಗೆ ಪ್ರಯಾಣಕ್ಕೆ ಸುಲಭವಾಗುತ್ತದೆ. ಇಲ್ಲಿ ರೈಲು ನಿಲುಗಡೆ ಮಾಡುವುದರಿಂದ ರೈಲ್ವೇ ಇಲಾಖೆಗೂ ಲಾಭವಾಗಲಿದೆ ಎಂದುಹೋರಾಟ ಸಮಿತಿಯ ಸಂಚಾಲಕ ರಾಜೀವ ಪಡುಕೋಣೆ ಹೇಳಿದರು.
ಅವರು ಸೇನಾಪುರ ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲು ನಿಲುಗಡೆ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಪಾದಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದರು.
ಸೇನಾಪುರದಲ್ಲಿ ಎಕ್ಸ್ ಪ್ರೆಸ್ ರೈಲು ನಿಲುಗಡೆಯಾದರೇ ಇಲ್ಲಿನ ಸ್ಥಳೀಯ ಪ್ರವಾಸೋದ್ಯಮ ಮತ್ತು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಾಗಲಿದೆ. ಸೇನಾಪುರದ ರೈಲ್ವೇ ನಿಲ್ದಾಣದ ಸುತ್ತಮುತ್ತಲಿನ ಪ್ರವಾಸೋದ್ಯಮಕ್ಕೂ ಇದು ಪರೋಕ್ಷವಾಗಿ ಅನುಕೂಲವಾಗಲಿದೆ. ರೈಲು ನಿಲುಗಡೆಯಾಗುವ ತನಕ ಹೋರಾಟ ನಿರಂತರವಾಗಿ ಮಾಡುತ್ತೇವೆ. ಸರ್ಕಾರ ಮತ್ತು ರೈಲ್ವೆ ಇಲಾಖೆ ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸದೇ ಇದ್ದಲ್ಲಿ ಅನಿರ್ದಿಷ್ಟಾವಧಿ ಹೋರಾಟ ಮಾಡುತ್ತೇವೆ ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ.
ಪತ್ರಕರ್ತ ಜಾನ್ ಡಿʼಸೋಜಾ ಮಾತನಾಡಿ, ರೈಲ್ವೇ ನಿಲುಗಡೆಗೆ ತಾಂತ್ರಿಕವಾಗಿ ಬೇಡಿಕೆಯನ್ನು ಮುಂದಿಡುವುದು ಅನಿವಾರ್ಯತೆ ಇದೆ. ಜನಪ್ರತಿನಿಧಿಗಳನ್ನು ಮುಂದಿಟ್ಟುಕೊಂಡು ಮುನ್ನಡೆಯಬೇಕು. ಇನ್ನು, ಜನಪ್ರತಿನಿಧಿಗಳನ್ನು ಮುಂದಿಟ್ಟುಕೊಂಡು ಇಲ್ಲಿನ ಅಗತ್ಯತೆಯನ್ನು ಗುರುತಿಸಿ ಬೇಡಿಕೆ ಇಡುವುದು ಬಹಳ ಮುಖ್ಯ. ತಾಂತ್ರಿಕವಾಗಿ ಹೋರಾಡುವುದು ಬಹಳ ಸೂಕ್ತವಾಗುತ್ತದೆ ಎಂದರು.
ತಾಲೂಕು ಪಂಚಾಯತ್ ನ ಮಾಜಿ ಸದಸ್ಯರಾದ ಕೆನಡಿ ಪಿರೆರಾ, ಧಾರ್ಮಿಕ ಮುಖಂಡ ಸುರೇಶ್ ಕಲ್ಲಗಾರ್, ಕೆಂಚನೂರು ಸೋಮಶೇಖರ್ ಶೆಟ್ಟಿ, ಮಾಜಿ ಮಂಡಲ ಪ್ರಧಾನರು ಅರುಣ್ ಕುಮಾರ್ ಶೆಟ್ಟಿ, ವರಾಹಸ್ವಾಮಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಸತೀಶ್ ಎಂ ನಾಯಕ್ ಮರವಂತೆ, ಸೇರಿ ೨೪ ಗ್ರಾಮದ ಗ್ರಾಮಸ್ಥರು, ಹೋರಾಟ ಸಮಿತಿಯ ಸದಸಸ್ಯರು ಉಪಸ್ಥಿತರಿದ್ದರು. ಹೋರಾಟ ಸಮಿತಿಯ ಮುಖಂಡ ಫಿಲಿಪ್ ಡಿʼಸಿಲ್ವಾ ಪ್ರಸ್ತಾವಿಸಿ ಸ್ವಾಗತಿಸಿದರು, ರಾಜೇಶ್ ಪಡುಕೋಣೆ ವಂದಿಸಿದರು, ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.
ಕುಂದಾಪುರ ತಾಲೂಕು ಸೇನಾಪುರ ರೈಲ್ವೇ ನಿಲ್ದಾಣದಲ್ಲಿ ಎಲ್ಲಾ ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಒತ್ತಾಯಿಸಿ ಸೇನಾಪುರ ರೈಲ್ವೇ ನಿಲ್ದಾಣದ ಎದುರು ನಡೆದ ಬೃಹತ್ ಪ್ರತಿಭಟನೆಯಲ್ಲಿ ೨೪ ಗ್ರಾಮದ ಜನರ ಸಮ್ಮುಖದಲ್ಲಿ ನಮ್ಮ ಹಕ್ಕೊತ್ತಾಯದ ಮನವಿಯನ್ನು ಪ್ರಾದೇಶಿಕ ರೈಲ್ವೇ ವ್ಯವಸ್ಥಾಪಕರು ಕೊಂಕಣ ರೈಲ್ವೇ ಕಾರ್ಪೋರೇಷನ್ ಲಿ, ಶಿರ್ವಾಡ, ಕಾರಾವಾರ ಇವರಿಗೆ ಸಲ್ಲಿಸಲಾಯಿತು.