ಕೋಟ, ಅ 10 (DaijiworldNews/MS): ಕರ್ನಾಟಕದ ಕರಾವಳಿ ಕಲೆ, ಸಾಹಿತ್ಯ, ಸಾಂಸ್ಕೃತಿಕತೆಗೆ ದೊಡ್ಡ ಕೊಡುಗೆ ನೀಡಿದೆ. ಅದೆಷ್ಟೋ ಸಾಧಕರು ಇಲ್ಲಿ ತಮ್ಮ ನಾಯಕತ್ವ, ಪ್ರತಿಭೆ, ಸಾಧನೆಯ ಮೂಲಕ ಈ ನಾಡಿನ ಕೀರ್ತಿ ಹೆಚ್ಚಿಸಿದ್ದಾರೆ. ರವೀಂದ್ರ ನಾಥ ಠಾಗೋರ್ ಅವರಂತ ಶ್ರೇಷ್ಠ ಸಾಹಿತ್ಯ ದಿಗ್ಗಜರ ಸಾಲಿನಲ್ಲಿ ನಿಲ್ಲಬಲ್ಲ ವ್ಯಕ್ತಿ ಕಡಿಲ ತಡಿಯ ಭಾರ್ಗವ ಕೋಟ ಶಿವರಾಮ ಕಾರಂತರು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಅವರು ಕೋಟತಟ್ಟು ಗ್ರಾಮ ಪಂಚಾಯತ್, ಡಾ| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ) ಕೋಟ, ಡಾ| ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ ಸಹಯೋಗದಲ್ಲಿ ಡಾ| ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಡಾ| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿವರಾಮ ಕಾರಂತರು ಮಹಾತ್ಮಾಗಾಂಧಿಯವರಿಂದ ಪ್ರಭಾವಿತರಾದವರು. ಅವರ ಬರಹಗಳಲ್ಲಿಯೂ ಕೂಡಾ ಇದನ್ನು ಗಮನಿಸಲು ಸಾಧ್ಯ. ಅಗಾಧವಾದ ಸಾಹಿತ್ಯ ನೀಡಿದ ಕಾರಂತರು ಪದ್ಮಭೂಷಣ ಪ್ರಶಸ್ತಿಯನ್ನೇ ಮರಳಿಸುತ್ತಾರೆ. ಅವರ ದೇಶಭಕ್ತಿ, ಪರಿಸರ ಕಾಳಜಿ, ಜನಪರ ನಿಲುವು, ಚಿಂತನೆಗಳು ಇಂದಿಗೂ ಮಾರ್ಗದರ್ಶಿಯಾಗಿದೆ ಎಂದರು.
ಭಾರತೀಯ ಸಂಸ್ಕೃತಿ ಇವತ್ತು ವಿಶ್ವಮಾನ್ಯವಾಗುತ್ತಿದೆ. ಈ ನೆಲದ ಸಂಸ್ಕೃತಿಯ ಶ್ರೇಷ್ಟತೆಯನ್ನು ಜಗತ್ತು ಗುರುತಿಸುತ್ತಿದೆ. ಭಾರತೀಯ ಶ್ರೇಷ್ಟ ಸಂಸ್ಕೃತಿ ಆಚಾರವಿಚಾರಗಳನ್ನು ಯುವ ಜನತೆ ಉಳಿಸಿಕೊಂಡು ಮುನ್ನೆಡೆಯಬೇಕು ಎಂದ ಅವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರ ಹೆಸರಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ-2023 ಅನ್ನು ಪ್ರಸಿದ್ಧ ಸಂಗೀತಕಾರ ಡಾ.ವಿದ್ಯಾಭೂಷಣ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ವಿದ್ಯಾಭೂಷಣ ಅವರು, ನೆರಳನ್ನು ಹಿಂಬಾಲಿಸಿ ಹೋಗದೆ ನೆರಳಿಗೆ ಬೆನ್ನು ಹಾಕಿ ನಡೆದಾಗ ನೆರಳು ನಮ್ಮ ಹಿಂಬಾಲಿಸುತ್ತದೆ. ಅದೇ ರೀತಿ ಪ್ರಶಸ್ತಿ ಪುರಸ್ಕಾರವನ್ನು ವಶೀಲಿಯಿಂದ ವಶ ಪಡಿಸಿಕೊಳ್ಳಬಾರದು. ಯೋಗ್ಯವಾಗಿದ್ದರೆ ಅದಾಗಿಯೇ ಬರುತ್ತದೆ. ಸಾಧನೆಗೆ ಆರ್ಹವಾಗಿ ಪ್ರಶಸ್ತಿ ಬಂದಾಗ ಸಂತೋಷದಿಂದ ಸ್ವೀಕಾರ ಮಾಡಬೇಕು. ಇವತ್ತು ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ನೀಡಿದ್ದಾರೆ. ನನ್ನ ಪಾಲಿಗೆ ಇದು ಜ್ಞಾನಪೀಠ ಸಿಕ್ಕಂತಾಗಿದೆ ಎಂದರು.
ಶಿವರಾಮ ಕಾರಂತ ಎನ್ನುವ ಯುಗ ಪುರುಷನಿಗೆ ಪ್ರೀತಿಯ ದ್ಯೋತಕವಾಗಿ ಅವರ ಹುಟ್ಟೂರಲ್ಲಿ ಕಾರಂತ ಥೀಂ ಪಾರ್ಕ್ನ್ನು ಕಾಣಿಕೆಯಾಗಿ ನೀಡಿದ್ದಿರಿ. ಕಾರಂತರು ಎಲ್ಲ ವಯಸ್ಸಿನರಿಗೂ ಒಂದೊಂದು ರೀತಿಯಲ್ಲಿ ಇಷ್ಟವಾಗುತ್ತಾರೆ. ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಅವರ ಕಲ್ಪನೆಗಳು, ಆಲೋಚನೆಗಳು, ಪರಿಸರ ಸಂರಕ್ಷಣೆ, ಕಲೆ, ಸಾಹಿತ್ಯ ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ಅವರು ಕೆಲಸ ಮಾಡಿದ್ದಾರೆ. ಅವರ ಒಟ್ಟು ಆಶಯ ಸಮಾಜಮುಖಿಯಾಗಿದ್ದವು. ಸಂಗೀತ ಕ್ಷೇತ್ರದ ಬಗ್ಗೆ ಅವರ ಒಲವು ಅಗಾಧವಾಗಿತ್ತು. ಸಂಗೀತಕ್ಕೆ ಲೋಪವಾಗುವುದನ್ನು ಅವರು ಸಹಿಸುತ್ತಿರಲಿಲ್ಲ. ತೊಡೆಮುರಿಯುವ ಸಂಗೀತ ಬೇಡ ಎಂದು ನೇರವಾಗಿ ಹೇಳುತ್ತಿದ್ದರು ಎಂದರು.
ಕುಂದಾಪುರ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಕಾರಂತರು ನಿರ್ವಹಿಸಿದ ಕಾರ್ಯ ಅತ್ಯಮೋಘ.. ಕನ್ನಡದಲ್ಲೇ ಬರೆದು ವಿಶ್ವ ಸಾಹಿತ್ಯ ಪ್ರಪಂಚದ ಎತ್ತರಕ್ಕೆ ಏರಿಸಿದೆ. ಈ ಮಹಾನ್ ಸಾಹಿತಿಯ ಹುಟ್ಟೂರ ಪ್ರಶಸ್ತಿಯನ್ನು ಡಾ.ವಿದ್ಯಾಭೂಷಣ್ ಅವರಿಗೆ ನೀಡುತ್ತಿರುವುದು ಅರ್ಥಪೂರ್ಣ ಎಂದರು.
ಕಾರ್ಯಕ್ರಮದಲ್ಲಿ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಉಡುಪಿ ಕ್ಷೇತ್ರದ ಶಾಸಕ ಯಶ್ ಪಾಲ್ ಸುವರ್ಣ, ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ ಶೆಟ್ಟಿ, ಡಾ.ಶಿವರಾಮ ಕಾರಂತ ಪ್ರತಿಷ್ಠಾನದ ಅಧ್ಯಕ್ಷ ಆನಂದ ಸಿ.ಕುಂದರ್, ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ ಯು.ಎಸ್ ಶೆಣೈ ಉಪಸ್ಥಿತರಿದ್ದರು.
ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸ್ವಾಗತಿಸಿ, ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಕುಂದರ್ ವಂದಿಸಿದರು. ಶಿಕ್ಷಕರಾದ ನರೇಂದ್ರ ಕುಮಾರ್ ಕೋಟ ಮತ್ತು ಸತೀಶ್ ಕಾರ್ಯಕ್ರಮ ನಿರ್ವಹಿಸಿದರು.