Karavali
ಉಡುಪಿ: ಮಲೆಕುಡಿಯ ಜನಾಂಗದವರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ
- Mon, Oct 09 2023 09:56:15 PM
-
ಉಡುಪಿ, ಅ 09 (DaijiworldNews/HR): ಹೆಬ್ರಿ ತಾಲೂಕು ನಾಡ್ಪಾಲು ಗ್ರಾಮ ಪಂಚಾಯಿತಿಯ ಪಶ್ಚಿಮ ಘಟ್ಟಗಳ ತಪ್ಪಲಿನ ಕಾಡಿನ ಅಂಚಿನಲ್ಲಿ ಬಹುತೇಕ ಸಮಾಜದ ಕಟ್ಟ ಕಡೆಯ, ಜನವಸತಿಯ ಕೊನೆಯ ಪ್ರದೇಶದಲ್ಲಿ ನೆಲೆಸಿರುವ, ಮಲೆಕುಡಿಯ ಕುಟುಂಬಗಳನ್ನು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಶನಿವಾರ ಭೇಟಿ ಮಾಡಿದರು.
ನಗರ ಪ್ರದೇಶದಿಂದ ಬಹುದೂರದ, ಅರಣ್ಯದ ಅತ್ಯಂತ ಒಳಭಾಗದ ಪ್ರದೇಶಗಳಾದ ಪೀತಾಬೈಲು, ತಿಂಗಳ ಮಕ್ಕಿ, ತೆಂಗಮಾರು ಗ್ರಾಮದಲ್ಲಿ ವಾಸಿಸುವ ಬುಡಕಟ್ಟು ಕುಟುಂಬಗಳ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು 3 ರಿಂದ 4 ಕಿ.ಮೀ ಕಾಡು ಕಚ್ಛಾ ದಾರಿಯಲ್ಲಿ ಗುಡ್ಡಗಳನ್ನ ಹತ್ತಿ ಇಳಿದು ನದಿ, ಕೊಳ್ಳಗಳನ್ನು ದಾಟಿ ನಡೆದು ಕುಗ್ರಾಮಕ್ಕೆ ಭೇಟಿ ನೀಡಿದರು.
ಹಲವು ವರ್ಷಗಳಿಂದ ಆಧುನಿಕ ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ಮಲೆಕುಡಿಯ ಮೂಲ ಆದಿ ನಿವಾಸಿಗಳೊಂದಿಗೆ ಜಿಲ್ಲಾಧಿಕಾರಿಗಳು ಚರ್ಚಿಸಿ, ಅವರ ಪರಿಸ್ಥಿತಿಯನ್ನು ಖುದ್ದಾಗಿ ಅವಲೋಕಿಸಿ, ಬುಡಕಟ್ಟು ಜನಾಂಗದವರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲಾಗುವುದಾಗಿ ತಿಳಿಸಿದರು.
ಪಶ್ಚಿಮ ಘಟ್ಟಗಳ ಅಂಚಿನ ಕಾಡಿನ ತೆಂಗಮಾರು ಗ್ರಾಮದಲ್ಲಿ ವಾಸವಾಗಿರುವ ನಾರಾಯಣ ಗೌಡ ಅವರನ್ನು ಸಂಪರ್ಕಿಸಿ, ಅವರ ವಾಸಗೃಹವನ್ನು ವೀಕ್ಷಿಸಿ, ಸರ್ಕಾರದ ಸೌಲಭ್ಯಗಳು ತಲುಪುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ಅವರ ಸಮಸ್ಯೆಗಳನ್ನು ಆಲಿಸಿ, ಅವರಿಗೆ ಮನೆಯನ್ನು ನಿರ್ಮಿಸಿ ಕೊಡಲು ಸಮಗ್ರ ಗಿರಿಜನ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು.
ತಿಂಗಳಮಕ್ಕಿ ಗ್ರಾಮದಲ್ಲಿ ವಾಸವಿರುವ ವಿಕಲಚೇತನ ಲಕ್ಷಣಗೌಡ ಅವರನ್ನು ಭೇಟಿ ಮಾಡಿ, ಅಂಗವಿಕಲ ಪಿಂಚಣಿ ಪ್ರತಿ ತಿಂಗಳು ತಲುಪುತ್ತಿರುವ ಬಗ್ಗೆ ಮಾಹಿತಿ ಪಡೆದ ಅವರು, ಸರ್ಕಾರದಿಂದ ಬುಡಕಟ್ಟು ಜನರಿಗೆ ವಿಶೇಷವಾಗಿ ನೀಡುತ್ತಿರುವ ಆಹಾರ ಸಾಮಗ್ರಿಗಳ ಪೂರೈಕೆ ಬಗ್ಗೆ ಸಹ ಮಾಹಿತಿ ಪಡೆದು, ಮನೆಯ ದುರಸ್ತಿಗೆ ಅನುದಾನ ಒದಗಿಸಲು ಸಮಗ್ರ ಗಿರಿಜನ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ಪೀತಬೈಲು ಗ್ರಾಮಕ್ಕೆ ಭೇಟಿ ನೀಡಲು ಕಾಡಿನ ಕಚ್ಛಾ ರಸ್ತೆಯಲ್ಲಿ ನಡೆದು ಕಾಲು ಸಂಕದ ಮೂಲಕ ದಾಟಲು ಮುಂದಾದಾಗ, ಕೆಲವೇ ಕ್ಷಣದ ಮುಂದೆ ಜಿಲ್ಲಾಧಿಕಾರಿಗಳಿಗೆ ಮಾರ್ಗಸೂಚಕರಾಗಿ ನಡೆಯುತ್ತಿದ್ದ ಎ.ಏನ್.ಎಫ್ ನ ಸಿಬ್ಬಂದಿ ಆಯತಪ್ಪಿ, ಕಾಲುಸಂಕದ ಮೇಲಿಂದ ಕೆಳಗೆ ಬೀಳುವುದನ್ನು ಕಣ್ಣಾರೆ ಕಂಡರೂ, ಅದೇ ಕಾಲು ಸಂಕದ ಮೇಲೆ ನಡೆದು ಮುಂದೆ ಸಾಗಿದ್ದು ವಿಶೇಷವಾಗಿತ್ತು. ಇದೇ ಸಂದರ್ಭದಲ್ಲಿ ನಿರ್ಮಾಣದ ಹಂತದಲ್ಲಿದ್ದ ಕಿಂಡಿ ಅಣೆಕಟ್ಟು ಒಳಗೊಂಡ ಸೇತುವೆಯ ಕಾಮಗಾರಿಯನ್ನು ವೀಕ್ಷಿಸಿ, ಸ್ಥಳೀಯ ವಾಸಿಗಳಿಗೆ ಈ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸುವ ಭರವಸೆಯನ್ನು ನೀಡಿದರು.
ದಶಕಗಳಿಂದ ವಿದ್ಯುತ್ ಸಂಪರ್ಕ ಹೊಂದದೇ ಇರುವ ಪೀತಾಬೈಲು ಗ್ರಾಮದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಮೀಪದಲ್ಲಿ ಹರಿಯುವ ಜಲ ಮೂಲವನ್ನು ಬಳಸಿಕೊಂಡು ಕಿರು ಜಲ ವಿದ್ಯುತ್ ಯೋಜನೆಯ ಟರ್ಬೈನಿಗೆ ಚಾಲನೆ ನೀಡಿ, ನೀರಿನ ಮೂಲವನ್ನು ವೀಕ್ಷಿಸಲು ತೆರಳುವಾಗ ಆಯತಪ್ಪಿ ನೆಲಕ್ಕೆ ಉರುಳಿದರು ಛಲದಿಂದ ಗುಡ್ಡವನ್ನು ಹತ್ತಿ, ಕಿರು ಜಲ ವಿದ್ಯುತ್ ಯೋಜನೆಯ ನೀರಿನ ಸೆಲೆಯನ್ನು ವೀಕ್ಷಿಸಿ, ಟರ್ಬೈನ್ ಉನ್ನತೀಕರಣಗೊಳಿಸಲು ಸೂಚನೆ ನೀಡಿದರು.
ಕಾಡಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಅವರಿಗೆ ಸೂಕ್ತ ಶಿಕ್ಷಣ ಸಿಗಬೇಕು, ಕಾಡಿನಲ್ಲಿಯೇ ಬೆಳೆದ ಅವರು ಅರಣ್ಯ ಇಲಾಖೆಯ ನೌಕರರಾದರೆ ಅರಣ್ಯ ರಕ್ಷಣೆಗೆ ಮುಂದಾಗುತ್ತಾರೆ ಅಥವಾ ಇತರೆ ಕ್ಷೇತ್ರದಲ್ಲಿ ಅವರು ಕಾರ್ಯನಿರ್ವಹಿಸಿಲು ಇಚ್ಛೆ ಇದ್ದರೆ ಅದಕ್ಕನುಗುಣವಾಗಿ ಶಿಕ್ಷಣ ನೀಡಲು ಮುಂದಾಗಲಾಗುವುದು ಎಂದು ತಿಳಿಸಿದ ಅವರು, ಪೀತಬೈಲಿನ ವಾಸಿ ನಾರಾಯಣ ಗೌಡ ರವರ ಮಗಳು ಪ್ರಮೀಳಾ ಪಿಯುಸಿ ವ್ಯಾಸಂಗ ಮುಗಿಸಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ ವಿಷಯ ತಿಳಿದ ಜಿಲ್ಲಾಧಿಕಾರಿಗಳು, ವಿದ್ಯಾಭ್ಯಾಸವನ್ನು ಮುಂದುವರಿಸಲು ಮನವೊಲಿಸಿ, ಬನ್ನಂಜೆಯ ವಿದ್ಯಾರ್ಥಿ ನಿಲಯದಲ್ಲಿ ತಂಗಲು ಹಾಗೂ ನರ್ಸಿಂಗ್ ವಿದ್ಯಾಭ್ಯಾಸ ಮಾಡಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ತಿಂಗಳಮಕ್ಕಿ ಗ್ರಾಮ ವ್ಯಾಪ್ತಿಯ ಪೀತಬೈಲು ಗ್ರಾಮ ನಿವಾಸಿಗಳಿಗೆ ಕುಡಿಯುವ ನೀರು ವ್ಯವಸ್ಥೆಯನ್ನು ಸ್ಥಳೀಯವಾಗಿ ಎತ್ತರ, ಗುಡ್ಡ ಪ್ರದೇಶದಿಂದ ಹರಿಯುವ ನೀರಿನ ತೊರೆಯಿಂದ 1.50 ಲಕ್ಷ ರೂ. ಗಳಲ್ಲಿ ನೀರಿನ ಪೈಪ್ಲೈನ್ ಅನ್ನು ಅಳವಡಿಸಿ, ದಿನದ 24 ಗಂಟೆ ನಳ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದ್ದು, ಇದಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ.ಎಚ್ ನಳವನ್ನು ಬಿಡುವ ಮೂಲಕ ಚಾಲನೆ ನೀಡಿದರು. ಇದರಿಂದ ಸ್ಥಳೀಯ ನಿವಾಸಿಗಳಿಗೆ ತಮ್ಮ ಮನೆಯ ಅಂಗಳದಲ್ಲಿಯೇ ನೀರಿನ ವ್ಯವಸ್ಥೆ ಕಲ್ಪಿಸಿದಂತಾಗಿತ್ತು.
ದುಡಿಯುವ ಕೈಗಳಿಗೆ ಕೆಲಸ ಖಾತ್ರಿಪಡಿಸುವ ಉದ್ಯೋಗ ಖಾತ್ರಿ ಯೋಜನೆಯ ಜಾಬ್ಕಾರ್ಡನ್ನು ಅಲ್ಲಿನ ಸ್ಥಳಿಯರಿಗೆ ವಿತರಿಸಿ, ಉದ್ಯೋಗ ಖಾತ್ರಿ ಯೋಜನೆಯಡಿ ತಮ್ಮ ಗ್ರಾಮಗಳಿಗೆ ಕೈಗೊಳ್ಳಬಹುದಾದ ಸಮುದಾಯ ಕಾಮಗಾರಿಗಳ ಬಗ್ಗೆ ಹಾಗೂ ವೈಯಕ್ತಿಕ ಕಾಮಗಾರಿಗಳಾದ ರಸ್ತೆ ನಿರ್ಮಾಣ, ದನದ ಕೊಟ್ಟಿಗೆ, ಬಚ್ಚಲ ಗುಂಡಿ, ಅಡಿಕೆ ತೆಂಗು ತೋಟಗಳ ರಚನೆ, ಹಣ್ಣು ತೋಟಗಳ ರಚನೆ, ಕಾಲು ಸಂಕಗಳ ನಿರ್ಮಾಣ, ಜಮೀನುಗಳ ಬದು ನಿರ್ಮಾಣ, ಸೇರಿದಂತೆ ಮತ್ತಿತರ ಶಾಶ್ವತ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿ ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಆಧುನಿಕ ಯುಗದಲ್ಲಿಯೂ ವೈಯಕ್ತಿಕ ಶೌಚಾಲಯವನ್ನು ನಿರ್ಮಿಸಿಕೊಳ್ಳದೆ ಇರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಶೌಚಾಲಯ ನಿರ್ಮಾಣಕ್ಕೆ ಪಂಚಾಯಿತಿಯ ಮೂಲಕ ಅರ್ಜಿ ಸಲ್ಲಿಸಿ, ಅನುದಾನ ಪಡೆದು ಶೌಚಾಲಯ ನಿರ್ಮಾಣ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ನಾಲ್ಪಾಡು ಗ್ರಾಮ ಪಂಚಾಯತ್ ಅಧ್ಯಕ್ಷ ನವೀನ್ ಕುಮಾರ್, ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್, ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯ ಯೋಜನಾ ಸಮನ್ವಯ ಅಧಿಕಾರಿ ದೂದ್ಪೀರ್, ಹೆಬ್ರಿ ತಾಲೂಕು ತಹಶೀಲ್ದಾರ್ ಪುರಂದರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೀತಲ್, ಸಹಾಯಕ ಕಾರ್ಯಪಾಲಕ ಅಭಿಯಂತರ ಸದಾನಂದ, ಇಂಜಿನಿಯರ್ ಮಧುಗೌಡ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು , ಕುಂದಾಪುರ ಉಪವಿಭಾಗಾಧಿಕಾರಿಗಳು ಸೇರಿದಂತೆ ಮತ್ತಿತರ ಇಲಾಖೆಯ ಅಧಿಕಾರಿಗಳೊಂದಿಗೆ ಸುರಿಯುವ ಮಳೆಯಲ್ಲಿಯೇ 3 ಕಿ.ಮೀ ನಡೆದು ಪಶ್ಚಿಮ ಘಟ್ಟಗಳ ಕಾಡಿನ ಅಂಚಿನಲ್ಲಿ ವಾಸಿಸುವ ಮಲೆಕುಡಿಯ ಜನಾಂಗದವರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ, ಅವರುಗಳಿಗೆ ಏನೆಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಪರಿಶೀಲಿಸಿದ್ದು, ಅಧಿಕಾರಿಗಳು ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.