ಉಡುಪಿ, ಅ 08 (DaijiworldNews/HR): ವಿದ್ಯಾರ್ಥಿ ಜೀವನದಲ್ಲಿ ಅತೀ ಹೆಚ್ಚಿನ ಪರಿಶ್ರಮ ಪಟ್ಟು ಶಿಕ್ಷಣದಲ್ಲಿ ಸಾಧನೆ ತೋರಿದ್ದಲ್ಲಿ ಮುಂದಿನ ಜೀವನದಲ್ಲಿ ಉನ್ನತ ಸ್ಥಾನ ಗಳಿಸಬಹುದಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ| ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಅಂಬಾಗಿಲಿನಲ್ಲಿರುವ ಧರ್ಮಪ್ರಾಂತ್ಯದ ಪಾಲನಾ ಕೇಂದ್ರ ಅನುಗ್ರಹದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಹಾಗೂ ಮುಂಬೈ ಜಾನ್ ಡಿಸಿಲ್ವಾ ಫೌಂಡೇಶನ್ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರ ವಿಸ್ತಾರವಾಗಿದ್ದು ಹೊಸ ಹೊಸ ಪ್ರಯೋಗಗಳಿಗೆ ಇಂದಿನ ವಿದ್ಯಾರ್ಥಿ ಸಮುದಾಯ ಆಸಕ್ತಿಯನ್ನು ತೋರಿದಾಗ ಉನ್ನತ ಸ್ಥಾನ ಲಭಿಸಲು ಸಾಧ್ಯವಿದೆ. ಸಮುದಾಯದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸರಕಾರಿ ಸೇವೆಯತ್ತ ಆಸಕ್ತಿ ತೋರಬೇಕು. ಸಮಾಜದಲ್ಲಿ ಹಲವಾರು ಅವಕಾಶಗಳಿದ್ದು ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಇಂದಿನ ಮಕ್ಕಳು ಹೆಚ್ಚು ಹೆಚ್ಚು ಎದುರಿಸುವತ್ತ ಗಮನ ಹರಿಸಬೇಕು ಎಂದರು.
ಭಾರತೀಯ ಅಂಚೆ ಸೇವೆಗಳ ನಿವೃತ್ತ ಸದಸ್ಯ ಡಾ| ಚಾರ್ಲ್ಸ್ ಲೋಬೊ ದಿಕ್ಸೂಚಿ ಭಾಷಣ ಮಾಡಿ ಕ್ರೈಸ್ತ ಸಮುದಾಯ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಸರಕಾರಿ ಹುದ್ದೆಗಳತ್ತ ಆಸಕ್ತಿ ತೋರಬೇಕು ಇದಕ್ಕಾಗಿ ಪ್ರಾಥಮಿಕ ಹಂತದಲ್ಲಿಯೇ ಪ್ರಯತ್ನ ಮಾಡಿದಾಗ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಿದೆ ಎಂದರು.
ಮುಂಬೈ ಜಾನ್ ಡಿಸಿಲ್ವಾ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಉಡುಪಿ ಧರ್ಮಪ್ರಾಂತ್ಯ ವ್ಯಾಪ್ತಿಯ 53 ಚರ್ಚುಗಳಲ್ಲಿ ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾ ನೀಡಲಾಯಿತು. ಅಲ್ಲದೆ ಪಿಎಚ್ ಡಿ ಪದವಿ ಪಡೆದ ಡಾ|ಸಿಂಡ್ರೆಲ್ಲಾ ಗೊನ್ಸಾಲ್ವಿಸ್ ಮತ್ತು ಸಿಎ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿನಲ್ ಜೋಸೇಫ್ ಡಿಕೊಸ್ತಾ ಇವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷರಾದ ಸಂತೋಷ್ ಕರ್ನೆಲಿಯೋ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಾನ್ ಡಿಸಿಲ್ವಾ ಫೌಂಡೇಶನ್ ಅಧ್ಯಕ್ಷ ಜಾನ್ ಗ್ಲ್ಯಾಡಿಸ್ ಡಿಸಿಲ್ವಾ, ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಆಧ್ಯಾತ್ಮಿಕ ನಿರ್ದೇಶಕ, ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಷಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ನಿಯೋಜಿತ ಅಧ್ಯಕ್ಷರಾದ ರೊನಾಲ್ಡ್ ಆಲ್ಮೇಡಾ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಮಾಜಿ ಅಧ್ಯಕ್ಷರಾದ ವಲೇರಿಯನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಂಚಾಲಕರಾದ ಡಾ| ಜೆರಾಲ್ಡ್ ಪಿಂಟೊ ಸ್ವಾಗತಿಸಿ, ಕಾರ್ಯದರ್ಶಿ ಒಲಿವೀಯಾ ಡಿಮೆಲ್ಲೊ ವಂದಿಸಿದರು. ಲೆರಿಸ್ಸಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.