ಉಡುಪಿ, ಎ13(SS): ಇಲ್ಲಿನ ಉಡುಪಿ ಸಮೀಪದ ಪೆರಂಪಳ್ಳಿಯ ಅತ್ಯಾಚಾರ ನಡೆಸಿದ ಅಪರಾಧಿಗೆ ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯ 27 ವರ್ಷ ಕಠಿನ ಸಜೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಅರುಣ ಆಚಾರಿ (32) 27 ವರ್ಷ ಕಠಿಣ ಶಿಕ್ಷೆಗೆ ಒಳಗಾಗಿದ್ದು, ಆತನಿಗೆ 3 ವರ್ಷಗಳಿಂದ ಜಾಮೀನು ದೊರೆತಿರಲಿಲ್ಲ.
2016ರ ಜು.16ರಂದು ಬೆಳಗ್ಗೆ 8.30ರ ವೇಳೆಗೆ ಅರುಣ ಆಚಾರಿ ಶಾಲೆಗೆ ಹೊರಟಿದ್ದ ಮಂದ ಬುದ್ಧಿಯ ಬಾಲಕಿಯನ್ನು ಅಪಹರಿಸಿ ಮಣಿಪಾಲದ ಲಾಡ್ಜಿಗೆ ಕರೆದೊಯ್ದಿದ್ದ. ಅಲ್ಲಿ ರೂಮ್ ಸಿಗದಿದ್ದಾಗ ತನ್ನ ಮನೆಗೆ ಕರೆ ತಂದು ಲೈಂಗಿಕ ದೌರ್ಜನ್ಯ ಎಸಗಿದ್ದನು. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಕುರಿತು ನ್ಯಾಯಾಧೀಶ ಸಿ.ಎಂ.ಜೋಷಿ ಆರೋಪ ಸಾಬೀತಾಗಿರುವುದಾಗಿ ಎ.10ರಂದು ತೀರ್ಪು ನೀಡಿದ್ದರು. ಇದೀಗ ಅರುಣ ಆಚಾರಿಗೆ ಅತ್ಯಾಚಾರ ಮಾಡಿರುವುದಕ್ಕೆ 10 ವರ್ಷ ಕಠಿನ ಸಜೆ ಮತ್ತು 30 ಸಾ. ರೂ. ದಂಡ, ಪೋಕ್ಸೋ ಪ್ರಕರಣದಡಿ 10 ವರ್ಷ ಕಠಿನ ಸಜೆ ಮತ್ತು 50 ಸಾ. ರೂ. ದಂಡ, ಅಪಹರಣ ಪ್ರಕರಣಕ್ಕೆ 7 ವರ್ಷಗಳ ಕಠಿನ ಸಜೆ ಮತ್ತು 30 ಸಾ. ರೂ. ದಂಡ ವಿಧಿಸಲಾಗಿದೆ.
1.10 ಲ.ರೂ. ದಂಡದಲ್ಲಿ 1 ಲ.ರೂ.ಗಳನ್ನು ಸಂತ್ರಸ್ತ ಬಾಲಕಿಗೆ ನೀಡಬೇಕು. 10 ಸಾ. ರೂ.ಗಳನ್ನು ನ್ಯಾಯಾಲಯದ ವೆಚ್ಚಕ್ಕೆ ಬಳಸಬೇಕು ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.
ನ್ಯಾಯಾಧೀಶರು ಶಿಕ್ಷೆ ಪ್ರಕಟಿಸುತ್ತಿದ್ದಂತೆಯೇ ಕಟಕಟೆಯಲ್ಲಿದ್ದ ಅಪರಾಧಿ ಕಣ್ಣೀರಿಟ್ಟ ಘಟನೆ ಕೂಡ ನಡೆದಿದೆ.