ಉಡುಪಿ, ಅ 08 (DaijiworldNews/HR): ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ನಡೆದಿರುವ ಸುಮಾರು 14 ಕೋಟಿ ರೂಪಾಯಿ ಭ್ರಷ್ಟಾಚಾರದ ಕುರಿತಾಗಿ ಜನಜಾಗೃತಿ ಮೂಡಿಸುವ ಸಲುವಾಗಿ ಅಕ್ಟೋಬರ್ 09 ರಂದು ಬೆಳಿಗ್ಗೆ 10 ಗಂಟೆಗೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಬಳಿಯಿಂದ ಬ್ರಹ್ಮಾವರ ಪೇಟೆಯ ವರೆಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನಾ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್ ತಿಳಿಸಿದ್ದಾರೆ.
ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಉಳಿಸುವ ಸಲುವಾಗಿ ನಮ್ಮ ಸರಕಾರ ನಿರಂತರವಾಗಿ ಪ್ರೋತ್ಸಾಹ ನೀಡುತ್ತಾ ಬಂದಿತ್ತು. ಕಳೆದ ಬಾರಿ ಸಿದ್ದರಾಮಯ್ಯ ಸರ್ಕಾರ ಆಡಳಿತದಲ್ಲಿ ಇದ್ದಾಗ ಕೂಡ ಸುಮಾರು 13 ಕೋಟಿ ರೂಪಾಯಿ ಯನ್ನು ಕಾರ್ಖಾನೆಯ ಪುನಶ್ಚೇತನ ಕ್ಕಾಗಿ ಬಿಡುಗಡೆ ಮಾಡಿತ್ತು. 40 ವರ್ಷದ ಹಿಂದೆ ನಮ್ಮ ನಾಯಕರಾದ ಆಸ್ಕರ್ ಫೆರ್ನಾಂಡಿಸ್ ನೇತೃತ್ವದಲ್ಲಿ ಈ ಸಕ್ಕರೆ ಕಾರ್ಖಾನೆ ಯನ್ನು ಸ್ಥಾಪನೆ ಮಾಡಲಾಗಿತ್ತು. ಪ್ರಾರಂಭದ ಕೆಲವು ವರ್ಷಗಲ್ಲಿ ಇದು ಲಾಭದಾಯಕವಾಗಿ ಕಾರ್ಯನಿರ್ವಹಿಸಿತ್ತು. ಸಕ್ಕರೆ ಕಾರ್ಖಾನೆ ನಡೆಯದೆ ಇಲ್ಲದಿದ್ದರೂ ಅದರ ಆರ್ಥಿಕ ಹೊಣೆಯನ್ನು ಸರಕಾರ ನೋಡುತಿತ್ತು. ಆದರೆ ಈಗಿನ ಆಡಳಿತ ಮಂಡಳಿ ಅಲ್ಲಿ ಸಕ್ಕರೆ ಕಾರ್ಖಾನೆ ನಡೆಸುವುದು ಸೂಕ್ತವಲ್ಲ ಎಂದು ತೀರ್ಮಾನಿಸಿ ಅಲ್ಲಿದ್ದ ಗುಜರಿ ಯನ್ನು ಮಾರಾಟ ಮಾಡಲು ನಿರ್ಧಾರ ಮಾಡಿತು. ಆದರೆ ಗುಜರಿ ಮಾರಾಟದಿಂದ ಬಂದ ಹಣದಲ್ಲಿ ರೈತರಿಗೆ ಪಾವತಿ ಮಾಡಿದ್ದಾರೆ ನಮಗೆ ಏನು ಆಕ್ಷೇಪ ಇರುತ್ತಿರಲಿಲ್ಲ. ಆದರೆ ಜಿಲ್ಲಾ ರೈತ ಸಂಘ ದವರು ಮಾಹಿತಿ ಹಕ್ಕು ಅಡಿಯಲ್ಲಿ ಪಡೆದುಕೊಂಡ ಮಾಹಿತಿಯ ಪ್ರಕಾರ ಪ್ರತಿ ಕೆಜಿ ಗುಜರಿ ಮಾರಾಟದಲ್ಲಿ ಸುಮಾರು 52 ರೂಪಾಯಿ ಯಷ್ಟು ಭ್ರಷ್ಟಾಚಾರ ನಡೆದಿದ್ದು ಇದರ ಅನ್ವಯ ಒಟ್ಟು ಸುಮಾರು 14 ಕೋಟಿ ರೂಪಾಯಿಯ ಅವ್ಯವಹಾರ ನಡೆದಿದೆ. ಇದು ಜಿಲ್ಲೆಯ ರೈತರ ಹಣ. ಸುಮಾರು 5 ಸಾವಿರ ಜನ ಈ ಪ್ರತಿಭಟನೆಯಲ್ಲಿ ಭಾಗವಹಿಸುವ ನೀರೀಕ್ಷೆ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ರಮೇಶ್ ಕಾಂಚನ್ ಮತ್ತು ದಿನಕರ್ ಹೆರೂರ್, ಮುಖಂಡರಾದ ಪ್ರಖ್ಯಾತ್ ಶೆಟ್ಟಿ , ಜ್ಯೋತಿ ಹೆಬ್ಬಾರ್, ಕುಶಲ್ ಶೆಟ್ಟಿ ಉಪಸ್ಥಿತರಿದ್ದರು.