ಉಡುಪಿ, ಅ 08 (DaijiworldNews/HR): ಉಡುಪಿಯ ಎಲ್ಲಾ 11 ಡಯಾಲಿಸೀಸ್ ಮಷೀನ್ ಗಳು ಕೂಡ ವರ್ಕ್ ಆಗುತ್ತಿಲ್ಲ. ಮಾತ್ರವಲ್ಲದೆ ರಾಜ್ಯದ 122 ಆಸ್ಪತ್ರೆಗಳಲ್ಲಿ ಕೂಡ ಇದೆ ಪರಿಸ್ಥಿತಿ ಇದೆ. ರಾಜ್ಯ ಸರಕಾರ ಏನು ನಿದ್ದೆ ಮಾಡುತ್ತಿದೆಯೇ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.
ಉಡುಪಿ ಜಿಲ್ಲಾಸ್ಪತ್ರೆಯ್ಲಲಿರುವ ಡಯಾಲಿಸಿಸ್ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ರಾಜ್ಯ ಸರ್ಕಾರ ಡಯಾಲಿಸಿಸ್ ರೋಗಿಗಳಿಗೆ ಸೂಕ್ತ ವ್ಯವಸ್ಥೆ ಮಾಡದೇ ಇರುವುದರ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, "ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಬೆಡ್ ಗಳೆಲ್ಲ ಖಾಲಿ ಇದೆ. ಉಡುಪಿಯ ಎಲ್ಲಾ 11 ಡಯಾಲಿಸೀಸ್ ಮಷೀನ್ ಗಳು ಕೂಡ ವರ್ಕ್ ಆಗುತ್ತಿಲ್ಲ. ಕಳೆದ ಒಂದು ತಿಂಗಳಿನಿಂದ ರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಎಸ್ ಕೆ ಸಂಜೀವಿನಿ ರಾಜ್ಯದ 122 ಕೇಂದ್ರದ ಯಂತ್ರಗಳು ಸ್ಥಗಿತವಾಗಿದೆ. ಅಕ್ಟೋಬರ್ 1ರಿಂದ ನಮ್ಮ ಸೇವೆ ನಿಲ್ಲಿಸುತ್ತೇವೆ ಎಂದು ಕಂಪನಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹೊಸ ಮಷೀನ್ ಇಲ್ಲ ರಿಪೇರಿ ಕಾರ್ಯ ಆಗುತ್ತಿಲ್ಲ, ಆರೋಗ್ಯ ಸೇವೆ ನಡೆಯುತ್ತಿಲ್ಲ. ಆರೋಗ್ಯ ಇಲಾಖೆ ಕಮಿಷನರ್ ಗೆ ಮಾಹಿತಿ ಇಲ್ಲ ಸರಕಾರ ಏನು ಮಾಡುತ್ತಿದೆ?" ಎಂದು ಪ್ರಶ್ನಿಸಿದರು.
"ಬಡವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಬಿಲ್ ಭರಿಸುವವರು ಯಾರು? ಬೇಜವಾಬ್ದಾರಿ ಸರಕಾರ ಅವರವರೇ ಕಿತ್ತಾಡೋದ್ರಲ್ಲಿ ತಲ್ಲಿನವಾಗಿದೆ. ರಾಜ್ಯದ ಎಲ್ಲಾ ಡಯಾಲಿಸಿಸ್ ಕೇಂದ್ರಗಳ ಪರಿಸ್ಥಿತಿ ಇದೆ ಆಗಿದೆ. ರೋಗಿಗಳ ಡಯಾಲಿಸಿಸ್ ಬಿಲ್ ಸರಕಾರ ವಾಪಸ್ ಕೊಡಬೇಕು. ಖಾಸಗಿ ವ್ಯಕ್ತಿಗಳು ಶಾಸಕರು ಹಣ ಭರಿಸಲು ಸಾಧ್ಯವಿಲ್ಲ. ರಾಜ್ಯದ ಬಡ ಕಿಡ್ನಿ ರೋಗಿಗಳ ಪರಿಸ್ಥಿತಿ ಏನಾಗಿದೆ ಗೊತ್ತಿಲ್ಲ. ಸಮಸ್ಯೆ ಗೊತ್ತಿದ್ದರೂ ರಾಜ್ಯ ಸರ್ಕಾರ ಪರ್ಯಾಯ ವ್ಯವಸ್ಥೆ ಯಾಕೆ ಮಾಡಿಲ್ಲ. ರಾಜ್ಯ ಸರ್ಕಾರ ನಿದ್ದೆ ಮಾಡುತ್ತಿದೆಯಾ, ಬಡವರ ಗೋಳು ಕೇಳುತ್ತಿಲ್ಲವೇ?. ರಾಜ್ಯ ವಿನಂತಿ ಮಾಡಿದರೆ ಕೇಂದ್ರ ಸಹಕಾರ ಮಾಡುತ್ತದೆ. ಕೇಂದ್ರ ಸರ್ಕಾರ ಹಣ ಕೊಡಲು ಸಿದ್ಧವಿದೆ. ಹೊಸ ಯಂತ್ರಗಳು ಮತ್ತು ತರಬೇತಿಯನ್ನು ಕೇಂದ್ರ ಸರ್ಕಾರ ಕೊಡುತ್ತದೆ. ರಾಜ್ಯ ಸರ್ಕಾರ ನಾಲ್ಕೇ ತಿಂಗಳಲ್ಲಿ ದಿವಾಳಿಯಾಗಿದೆ. ಈ ಬಗ್ಗೆ ಕೇಂದ್ರಕ್ಕೆ ವಿನಂತಿ ಮಾಡಿದ್ದರೆ ನಮ್ಮ ಗಮನಕ್ಕೆ ತನ್ನಿ" ಎಂದು ಆಗ್ರಹಿಸಿದ್ದಾರೆ.
ಇದೇ ಸಂಧರ್ಭದಲ್ಲಿ ಸಚಿವರು ಕರ್ನಾಟಕ ರಾಜ್ಯ ಸರಕಾರದ ಆರೋಗ್ಯ ಇಲಾಖೆಯ ಕಮಿಷನರ್ ಅವರಿಗೆ ಕರೆ ಮಾಡಿ ರೋಗಿಗಳಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಸರ್ಜನ್ ವೀಣಾ, ಮತ್ತು ಇತರ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.