ಉಡುಪಿ,ಅ 07 (DaijiworldNews/AK): ಪೌರಕಾರ್ಮಿಕರ ರಕ್ಷಣೆಗೆ ಹಾಗೂ ಅವರ ಶ್ರೇಯೋಭಿವೃದ್ಧಿಗೆ ಸರಕಾರ ಅನೇಕ ಯೋಜನೆಗಳು ಹಾಗೂ ಕಾಯ್ದೆಗಳನ್ನು ಜಾರಿಗೆ ತಂದಿದೆ, ಇದರ ಪ್ರಯೋಜನವನ್ನು ಪ್ರತಿಯೊಬ್ಬ ಪೌರಕಾರ್ಮಿಕರು ಪಡೆಯಬೇಕೆಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಇಂದು ನಗರದ ಅಜ್ಜರಕಾಡು ಪುರಭವನದಲ್ಲಿ, ಉಡುಪಿ ನಗರಸಭೆ ವತಿಯಿಂದ ನಡೆದ ಪೌರಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಉಡುಪಿ ನಗರವು ಸ್ವಚ್ಛತೆಗೆ ಹೆಸರುವಾಸಿಯಾಗಿದೆ. ನಗರದ ಸ್ವಚ್ಛತೆಗೆ ಪೌರಕಾರ್ಮಿಕರ ಕೊಡುಗೆ ಅವಿರತವಾಗಿದ್ದು, ನಗರವನ್ನು ಸ್ವಚ್ಛವಾಗಿಡಲು ಪೌರಕಾರ್ಮಿಕರು ಶ್ರಮ ವಹಿಸುತ್ತಿದ್ದಾರೆ. ಕೊರೋನಸಂದರ್ಭದಲ್ಲಿ ಪೌರಕಾರ್ಮಿಕರು ಸಮಾಜದ ಉಳಿವಿಗಾಗಿ ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ ಎಂದರು.
ಮಲ ಹೊರುವ ಪದ್ಧತಿ ನಿಷೇದಕ್ಕೆ , ಡಾ. ವಿ.ಎಸ್. ಆಚಾರ್ಯ ಅವರ ನೇತೃತ್ವದಲ್ಲಿ ದಿಟ್ಟ ನಿರ್ಧಾರ ಕೈಗೊಂಡು, ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಲ ಹೊರುವ ಪದ್ಧತಿಯನ್ನು ನಿಷೇಧಿಸಿದ ಕೀರ್ತಿ ಉಡುಪಿ ನಗರ ಸಭೆಗೆ ಸಲ್ಲುತ್ತದೆ.ಯಂತ್ರೋಪಕರಣಗಳನ್ನು ಬಳಸಿ ಮ್ಯಾನ್ಹೋಲ್ ಗಳ ಸ್ವಚ್ಛತೆಗೆ ಮುಂದಾಗಬೇಕೆಂದು ಕಾನೂನು ಜಾರಿಗೊಳಿಸಿದ್ದು, ಇದರಿಂದ ಹಲವಾರು ಜೀವಗಳ ರಕ್ಷಣೆಯಾಗಿದೆ .ಪೌರಕಾರ್ಮಿಕರ ಸುರಕ್ಷತೆಗೆ ಕೇಂದ್ರ ಸರ್ಕಾರವು ಸಹಾಯಿ ಮಿತ್ರ ಹಾಗೂ ನ್ಯಾಷನಲ್ ಸಫಾಯಿ ಕರ್ಮಚಾರಿ ಫೈನಾನ್ಸ್ ಎಂಡ್ ಡಿವಲಪ್ಮೆಂಟ್ ಕಾರ್ಪೋರೇಷನ್ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಪೌರಕಾರ್ಮಿಕರಿಗೆ ಸಾಲಸೌಲಭ್ಯ, ಆರೋಗ್ಯ, ಮಕ್ಕಳ ಶಿಕ್ಷಣ, ವಸತಿ ವ್ಯವಸ್ಥೆ, ವಿಮೆ ಸೇರಿದಂತೆ ಹಲವು ಸೌಲಭ್ಯಗಳನ್ನು ಜಾರಿಗೊಳಿಸಿದ್ದು, ಇದರ ಪ್ರಯೋಜನವನ್ನು ಪ್ರತಿಯೊಬ್ಬ ಪೌರಕಾರ್ಮಿಕರು ಪಡೆದುಕೊಳ್ಳುವಂತೆ ತಿಳಿಸಿದರು.
ಶಾಸಕ ಯಶ್ಪಾಲ್ ಎ ಸುವರ್ಣ ಮಾತನಾಡಿ, ಪೌರಕಾರ್ಮಿಕರು ಜೀವದ ಹಂಗನ್ನು ತೊರದು, ಕರ್ತವ್ಯಕ್ಕೆ ಚ್ಯುತಿಬಾರದಂತೆ ಪ್ರಮಾಣಿಕವಾಗಿ ಸ್ವಚ್ಚತಾ ಕೆಲಸವನ್ನು ನಿರ್ವಹಿಸುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಸರ್ಕಾರದ ಯೋಜನೆಗಳ ಕುರಿತು ಪೌರಕಾರ್ಮಿಕರಿಗೆ ಮಾಹಿತಿ ನೀಡಿ, ಆದರ ಪ್ರಯೋಜನವನ್ನು ಅವರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ ಕೆ ವಿದ್ಯಾ ಕುಮಾರಿ ಮಾತನಾಡಿ, ಪೌರಕಾರ್ಮಿಕರು ನಗರದ ಸ್ವಚ್ಛತೆಗೆ ಕಾಣಿಕೆ ನೀಡುತ್ತಿದ್ದು. ಅವರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಪ್ರತಿಯೊಬ್ಬ ನಾಗರಿಕರು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ. ಪೌರಕಾರ್ಮಿಕರೊಂದಿಗೆ ಕೈ ಜೋಡಿಸಬೇಕು ಪೌರಕಾರ್ಮಿಕರು ನಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯ ಕಡೆಗೆ ಗಮನಹರಿಸಬೇಕು ಎಂದರು.
ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ 'ಪೌರಕಾರ್ಮಿಕರಿಗೆ ಏರ್ಪಡಿಸಲಾದ ಕ್ರೀಡಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸಿದ 10 ಮಂದಿಯನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.