ಮಂಗಳೂರು, ಅ 07 (DaijiworldNews/MS): ಪರಿಣಾಮಕಾರಿ ಇಂದ್ರಧನುಷ್ ಕಾರ್ಯಕ್ರಮವು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಮುಂದುವರಿದ ಭಾಗವಾಗಿದ್ದು, ಅಗತ್ಯವಿರುವ ರೋಗನಿರೋಧಕ ಲಸಿಕೆಯಿಂದ ಭಾಗಶಃ ಪೂರ್ಣ ಪ್ರಮಾಣದಲ್ಲಿ ಬಿಟ್ಟು ಹೋದ ಮತ್ತು ಲಸಿಕಾ ವಂಚಿತ ಗರ್ಭಿಣಿಯರು ಮತ್ತು ಮಕ್ಕಳನ್ನು ಗುರುತಿಸಿ ಪೂರ್ಣ ಪ್ರಮಾಣದ ಲಸಿಕೆಯನ್ನು ನೀಡಲಾಗುವುದು ಎಂದು ಆರ್.ಸಿ.ಹೆಚ್ ಅಧಿಕಾರಿ ಡಾ.ರಾಜೇಶ್ ಹೇಳಿದರು.
ಅವರು ಅ.7ರಂದು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪರಿಣಾಮಕಾರಿ ಮಿಷನ್ ಇಂದ್ರಧನುಷ್5.0 ಕಾರ್ಯಕ್ರಮದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತಾನಾಡಿದರು.
ಮೂರನೇ ಸುತ್ತಿನ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಕಾರ್ಯಕ್ರಮಕ್ಕಾಗಿ ಮನೆ-ಮನೆ ಸಮೀಕ್ಷೆ ನಡೆಸಿ ಫಲಾನುಭವಿಗಳ ಪಟ್ಟಿ ಮಾಡಿ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದೆ. ನಿರ್ಧಿಷ್ಟವಾಗಿ ಕ್ರಿಯಾಯೋಜನೆಯಲ್ಲಿ ಗುರುತಿಸಿದ ಸ್ಥಳದಲ್ಲಿ ಲಸಿಕಾ ಶಿಬಿರಗಳನ್ನು ಆಯೋಜಿಸಲಾಗುವುದು. ಅಕ್ಟೋಬರ್ ತಿಂಗಳಲ್ಲಿ 6 ದಿನ ಶಿಬಿರ ನಡೆಯಲಿದೆ ಅ.9ರಿಂದ 14ರವರೆಗೆ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಂಬಂಧಿಸಿದ ಸ್ಥಳಗಳಲ್ಲಿ ಲಸಿಕೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಮೂರನೇ ಸುತ್ತಿನಲ್ಲಿ ಆಯೋಜಿಸಲಾಗಿರುವ ಲಸಿಕಾ ಶಿಬಿರಗಳು ಒಟ್ಟು 441, ಲಸಿಕೆಯಿಂದ ಬಿಟ್ಟು ಹೋದ ಮತ್ತು ಲಸಿಕಾ ವಂಚಿತ ಗರ್ಭಿಣಿಯರು ಒಟ್ಟು 583, 5 ವರ್ಷದ ಒಳಗಿನ ಒಟ್ಟು ಮಕ್ಕಳು 3,076 ಎಂದರು. ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಂಸ್ಥೆ, ನಗರ ಅಭಿವೃದ್ಧಿ ಸಂಸ್ಥೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾರ್ಮಿಕ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನೆಹರು ಯುವ ಕೇಂದ್ರ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಇತರ ಸಂಘ-ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳೆಪಾಡಿ,ಜಿಲ್ಲಾ ಶೂಶ್ರಣಾಧಿಕಾರಿ ಲೀಸ್ಸಿ ಮತ್ತು ತಾಲೂಕು ಆರೋಗ್ಯಧಿಕಾರಿ ಡಾ. ಸುಜಯ್ ಹಾಗೂ ಸಂಬಂಧಿಸಿದ ಅಧಿಕಾರಿಗಳು ಭಾಗವಹಿಸಿದ್ದರು.