ಉಡುಪಿ, ಅ 07 (DaijiworldNews/HR): "ಉಡುಪಿಯಲ್ಲಿ ಮಹಿಷಾ ದಸರಾ ನಡೆಸಲು ಬಜರಂಗದಳ, ವಿಶ್ವ ಹಿಂದೂ ಪರಿಷತ್ ಎಂದಿಗೂ ಅವಕಾಶ ಮಾಡಿ ಕೊಡುವುದಿಲ್ಲ. ಮಹಿಷಾ ದಸರಾ ಎಂಬುವುದು ಅಸುರ ಮನಸ್ಥಿತಿಯವರು ನಡೆಸಲು ಆರಂಭಿಸಿರುವ ಆಚರಣೆ" ಎಂದು ಬಜರಂಗದಳ ರಾಜ್ಯ ಸಂಚಾಲಕ ಸುನಿಲ್ ಕೆ ಆರ್ ಹೇಳಿದ್ದಾರೆ.
ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು "ಮಹಿಷಾ ದಸರಾ ಎನ್ನುವುದು ನಗರ ನಕ್ಸಲರು ಯೋಜಿಸಿರುವ ಆಚರಣೆ. ಮಹಿಷಾಸುರ ಓರ್ವ ಅಸುರ . ಇಂತಹದೇ ಅಸುರ ಮನಸ್ಥತಿಯವರು ಇದೀಗ ಮಹಿಷ ದಸರಾ ವನ್ನು ಆಚರಿಸಲು ಹೊರಟಿದ್ದಾರೆ. ಇದನ್ನು ಕೇವಲ ಒಂದು ಸಂಘಟನೆ ಅಲ್ಲ, ಇಡೀ ಹಿಂದೂ ಸಮಾಜ ಇದನ್ನು ವಿರೋಧಿಸಬೇಕು. ಇದು ಧರ್ಮ ವಿರೋಧಿ, ದೇಶ ವಿರೋಧಿ ಕೃತ್ಯ ಹೀಗಾಗಿ ಸರಕಾರ, ಪೋಲಿಸ್ ಇಲಾಖೆ ತಕ್ಷಣವೇ ಮಧ್ಯ ಪ್ರವೇಶ ಮಾಡಿ ಇದನ್ನು ತಡೆದು ಸೂಕ್ತ ಕಾನೂನು ಕ್ರಮ ಜರಗಿಸಬೇಕು. ಉಡುಪಿಯಲ್ಲಿ ಮಹಿಷ ದಸರಾ ಆಚರಣೆ ಮಾಡಲು ವಿಶ್ವ ಹಿಂದೂ ಪರಿಷತ್, ಬಜರಂಗದಳ ಯಾವತ್ತಿಗೂ ಅವಕಾಶ ಕೊಡುವುದಿಲ್ಲ" ಎಂದರು.
ಕಾರ್ಕಳದ ಪರಶುರಾಮನ ಮೂರ್ತಿಯ ಸತ್ಯಾಸತ್ಯತೆಯ ಕುರಿತಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸುನಿಲ್ ಕೆ ಆರ್ "ಕಾರ್ಕಳದ ಪರಶುರಾಮನ ಮೂರ್ತಿ ಫೈಬರ್ ನದ್ದಾ ಅಥವಾ ಬೇರೆ ಯಾವುದರದ್ಧು ಎಂದು ನಮಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಅದು ಈಗಾಗಲೇ ಉಡುಪಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದ್ದೆ. ಸಾವಿರಾರು ಜನರಿಗೆ ಆಕರ್ಷಣೆಯ ಕೇಂದ್ರವಾಗಿದೆ. ಖಂಡಿತವಾಗಿ ತನಿಖೆ ಆಗಬೇಕು" ಎಂದರು