ಉಡುಪಿ, ಅ 07 (DaijiworldNews/HR): ಹಿಂದೂ ಸಮಾಜೋತ್ಸವದ ಬ್ಯಾನರ್ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ನಗರಸಭೆಯಲ್ಲಿ ಕಮಿಷನರ್ ಜೊತೆ ಶಾಸಕ, ಬಿಜೆಪಿ ಬೆಂಬಲಿತ ಸದಸ್ಯರ ಜಟಾಪಟಿ ನಡೆದಿದ್ದು ಕಮಿಷನರ್ ರಾಯಪ್ಪ ಗರಂ ಆಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಮಿಷನರ್ ರಾಯಪ್ಪ, ನಾವು ಹೇಳಿದ ಕೆಲಸವನ್ನು ನಗರಸಭೆ ಅಧಿಕಾರಿಗಳು ಮಾಡಿಲ್ಲ. ನಾವು ಕೆಲಸವನ್ನೇ ಮಾಡವಾರದಾ? ಶಾಸಕರ ಕುರಿತು ನಮಗೆ ಖಂಡಿತವಾಗಿ ಗೌರವ ಇದೆ. ನಮಗೆ ಪೋಲಿಸ್ ಇಲಾಖೆಯಿಂದ ಅಕ್ರಮವಾಗಿ ಬ್ಯಾನರ್ ಅಳವಡಿಸಿರುವ ಬಗ್ಗೆ ಪತ್ರ ಬಂದಿತ್ತು. ಶಾಸಕರಿಗೆ ಕೂಡಾ ಇದರ ಕುರಿತು ಹೇಳಿ ಪರ್ಮಿಷನ್ ಪಡೆಯುವಂತೆ ಮಾಹಿತಿ ನೀಡಿದ್ದೆವು ಎಂದರು.
ಇವತ್ತು 29 ಪರ್ಮಿಷನ್ ಬೇಡಿಕೆ ಬಂದಿದೆ. ನಾನು ಯಾವುದೂ ರಿಜೆಕ್ಟ್ ಮಾಡಿಲ್ಲ. ನಾನೂ 30 ವರ್ಷ ಸರ್ವಿಸ್ ಮಾಡಿದ್ದೆನೆ, ನಾನೂ ಮಾತನಾಡಬೇಕು. ನಮಗೆ ಇದೆಲ್ಲಾ ಅಗತ್ಯ ಇಲ್ಲ. ನಾವು ಕೂಡಾ ಬೆಳಿಗ್ಗೆ 5.30 ಕ್ಕೆ ಬರಬೇಕಾದ ಅಗತ್ಯ ಇಲ್ಲ. 10.30 ಕ್ಮೆ ಬಂದು ಆಫೀಸ್ ಕೆಲಸ ಮಾಡಿ 5.30ಕ್ಕೆ ಹೋಗುತ್ತೇವೆ. ನಾವು ಇನ್ನು ಯಾವ ಬ್ಯಾನರ್ ಮುಟ್ಟಲ್ಲ, ಯಾವುದೇ ಅಕ್ರಮ ಮಾಡಿದರೂ ನಾವು ನೋಡುವುದಿಲ್ಲ ಎಂದು ಗರಂ ಆಗಿದ್ದಾರೆ.
ಇನ್ನು ನಾನು ಇಲ್ಲಿಗೆ ಬಂದು 3 ತಿಂಗಳು ಆಯಿತು. ಒಂದು ತಿಂಗಳು ಖಂಡಿತವಾಗಿ ನಾನು ಇಲ್ಲಿಂದ ಹೋಗುತ್ತೇನೆ. ಒಳ್ಳೆ ಅನುಭವ ನಮಗೆ ಆಗಿದೆ ಇಲ್ಲಿ. ನಾನು ಮಂಗಳೂರಿನಲ್ಲಿ ಡೆಪ್ಯುಟಿ ಕಮೀಷನರ್ ಆಗಿ ಕೂಡಾ ಕೆಲಸ ಮಾಡಿದ್ದೇನೆ ಎಂದು ಆರೋಪಗಳಿಗೆ ಗರಂ ಆಗಿ ಉತ್ತರಿಸಿದ್ದಾರೆ.