ಉಡುಪಿ, ಅ 07 (DaijiworldNews/HR): ಕರಾವಳಿ ಭಾಗದಲ್ಲಿರುವ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆಯಾಗಿರುವ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿರುವ ಗುಜರಿ ಮಾರಾಟ ಪ್ರಕ್ರಿಯೆಯಲ್ಲಿ ಭಾರೀ ಪ್ರಮಾಣದ ಭ್ರಷ್ಠಾಚಾರ ಮಾಡಿರುವ ಪ್ರಸ್ತುತ ಆಡಳಿತ ಮಂಡಳಿಯ ವಿರುದ್ದ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬ್ರಹ್ಮಾವರದಲ್ಲಿ ಅ.9ರಂದು ಸೋಮವಾರ ಆಯೋಜಿಸಿರುವ ಬೃಹತ್ ಪ್ರತಿಭಟನಾ ಸಭೆಗೆ ಜಿಲ್ಲೆಯ ರೈತರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅವ್ಯವಹಾರದ ಹಿಂದೆ ದೊಡ್ಡ ಜಾಲವೊಂದಿದ್ದು ಇದರಲ್ಲಿ ಹಿಂದಿನ ಬಿಜೆಪಿ ಸರಕಾರ ಹಾಗೂ ಪ್ರಸ್ತುತ ಆಡಳಿತ ಮಂಡಳಿಯ ಕೈವಾಡ ಇದ್ದು, ಕಾರ್ಖಾನೆಯನ್ನು ಮುಳುಗಿಸುವ ಉದ್ದೇಶದಿಂದ ಕೆಲಸ ನಡೆದಿದ್ದು ಸುಮಾರು 14 ಕೋಟಿ ರೂಪಾಯಿಗೂ ಅಧಿಕ ಹಣ ಲೂಟಿಯಾಗಿದೆ. ರೈತರಿಗೆ ಸೇರಿದ ಸೊತ್ತು ಕಣ್ಣೆದುರೇ ಲೂಟಿಯಾಗುತ್ತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಉಗ್ರ ರೀತಿಯ ಪ್ರತಿಭಟನೆಗೆ ಕಾಂಗ್ರೆಸ್ ಪಕ್ಷವು ಮುಂದಾಗಿದೆ.
ಇತ್ತೀಚೆಗೆ ಕಾರ್ಖಾನೆಯ ವಾರ್ಷಿಕ ಮಹಾಸಭೆಯ ವೇಳೆ ರೈತರು ಸಭೆಗೆ ಹಾಜರಾಗದಂತೆ ತಡೆಯುವ ನಿಟ್ಟಿನಲ್ಲಿ ಕಾರ್ಖಾನೆಯ ಪ್ರಸ್ತುತ ಅಧ್ಯಕ್ಷರು ಬಾಡಿಗೆ ಗೂಂಡಾಗಳನ್ನು ಇಟ್ಟಿರುವುದು ಕಂಡಾಗ ಇವರ ಭ್ರಷ್ಠಾಚಾರವನ್ನು ಪ್ರಶ್ನಿಸಬಾರದು ಎಂಬ ನಿಟ್ಟಿನಲ್ಲಿ ಇಂತಹ ವರ್ತನೆ ತೋರಿಸಿದ್ದು ಜಿಲ್ಲೆಯ ರೈತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ರೈತರ ಪರವಾಗಿ ಕಾಂಗ್ರೆಸ್ ಪಕ್ಷವು ಸದಾ ನಿಂತಿರುವ ಕಾರಣದಿಂದಾಗಿ ಹಿಂದೆ ಸಕ್ಕರೆ ಕಾರ್ಖಾನೆಯ ರೈತರಿಗೆ ನೆರವಿಗೆ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ರೈತರ ಸಾಲ ಹಾಗೂ ವೇತನಕ್ಕಾಗಿ ಸುಮಾರು 12 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವ ಮೂಲಕ ರೈತರಿಗೆ ನೆರವು ನೀಡಲಾಗಿತ್ತು. ಬಳಿಕ ಆಪರೇಷನ್ ಕಮಲದ ಮೂಲಕ ಬಂದ ಬಿಜೆಪಿ ಸರಕಾರವು ಕಾರ್ಖಾನೆಯ ಪುನಶ್ಚೇತನಕ್ಕೆ ಅಥವಾ ರೈತರ ಏಳಿಗೆಗೆ ಯಾವುದೇ ರೀತಿಯ ಚಿಂತನೆ ಮಾಡದೇ ಅದನ್ನು ಮಾರಾಟ ಮಾಡಿ ಹಣ ಮಾಡುವ ಉದ್ದೇಶ ಹೊಂದಿದ್ದು ಅದರಂತೆ ಗುಜರಿ ಮಾರಾಟದ ಪ್ರಕ್ರಿಯೆಯಲ್ಲಿ ಭಾರೀ ಪ್ರಮಾಣದ ಭ್ರಷ್ಠಾಚಾರ ಮಾಡಿರುವುದು ಇವರುಗಳ ನೈಜ ಉದ್ದೇಶವಿರುವುದು ಎದ್ದು ಕಾಣುತ್ತದೆ. ಈ ಭ್ರಷ್ಠಾಚಾರದಲ್ಲಿ ದೊಡ್ಡ ಮಟ್ಟದ ಜಾಲ ಇದ್ದು ಇದರ ವಿರುದ್ದ ಬೃಹತ್ ಮಟ್ಟದ ಹೋರಾಟ ಅನಿವಾರ್ಯವಾಗಿದ್ದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯು ಬ್ರಹ್ಮಾವರದಲ್ಲಿ ಅ.9ರಂದು ಸೋಮವಾರ ಬೆಳಿಗ್ಗೆ 10.00 ಗಂಟೆಗೆ ಆಯೋಜಿಸಿರುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗುವ ಮೂಲಕ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುವಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.