ಉಡುಪಿ, ಅ 07 (DaijiworldNews/HR): ಕೋಟ ಪೊಲೀಸ್ ಠಾಣಾ ನಿರೀಕ್ಷಕರು ಮತ್ತು ಸಿಬ್ಬಂದಿಗಳು ಇಬ್ಬರು ದಲಿತ ಮಹಿಳೆಯರ ಮೇಲೆ ಕಳವು ಪ್ರಕರಣ ಹೊರಿಸಿ ಎರಡು ದಿನ ಅಕ್ರಮವಾಗಿ ಕೂಡಿಟ್ಟು ಜಾತಿ ನಿಂದನೆ ಮಾಡಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ ಬಗ್ಗೆ ಆರೋಪ ವ್ಯಕ್ತವಾಗಿದೆ.
ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ಆಶಾ ಜಿ ಮತ್ತು ಸುಜಾತ ಎಂಬವರು ಅಕ್ಟೋಬರ್ 2 ರಂದು ನೂಜಿ ಗ್ರಾಮದ ಕಿರಣ್ ಕುಮಾರ್ ಶೆಟ್ಟಿ ಎಂಬವರ ಮನೆಗೆ ಕೆಲಸಕ್ಕೆಂದು ಹೋಗಿದ್ದು, ಮದ್ಯಾಹ್ನ ಕೆಲಸ ಮಾಡಿ ಮತ್ತೆ ಮನೆಗೆ ಹೋಗಿದ್ದಾರೆ. ಅದೇ ದಿನ ಸಂಜೆ 6:30 ಗಂಟೆಗೆ ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಸುಧಾ ಪ್ರಭುರವರು ದೂರುದಾರರಾದ ಆಶಾ ಜಿ ಇವರಿಗೆ ಕರೆ ಮಾಡಿ ಕಿರಣ್ ಕುಮಾರ್ ಶೆಟ್ಟಿಯವರ ಚಿನ್ನದ ಕೈ ಖಡ ಕಳೆದು ಹೋಗಿದ್ದು ಈ ಬಗ್ಗೆ ಠಾಣೆಗೆ ದೂರು ನೀಡಿದ್ದಾರೆ. ಹಾಗಾಗಿ ಈ ಕೂಡಲೇ ನೀವು ಠಾಣೆಗೆ ಬರಬೇಕು ಎಂದು ಹೇಳಿದ್ದು, ಆಶಾ ಜಿ ಅವರು ಕೋಟ ಠಾಣೆಗೆ ಹೋಗಿದ್ದಾರೆ.
ಇನ್ನು ಠಾಣೆಯಲ್ಲಿ ಉಪನಿರೀಕ್ಷಕರಾದ ಸುಧಾರವರು ಆಶಾ ಜಿ ಇವರನ್ನು ಅವ್ಯಚ್ಯಾವಾಗಿ ಬೈದು ನಿಂದಿಸಿ, ಜಾತಿ ನಿಂದನೆ ಮಾಡಿ ಹಣೆಗೆ ಪಿಸ್ತೂಲ್ ಅನ್ನು ಇಟ್ಟು ಎನ್ ಕೌಂಟರ್ ಮಾಡಿ ಕೊಂದು ಹಾಕುವುದಾಗಿ ಬೆದರಿಸಿದ್ದು ಮಾತ್ರವಲ್ಲದೇ ಠಾಣೆಯಲ್ಲಿ ಶೌಚಾಲಯ ಬಳಸಲು ಮತ್ತು ಕುಡಿಯಲು ನೀರು ಕೂಡಾ ನೀಡಿಲ್ಲ. ಮರುದಿನ ಅಕ್ಟೋಬರ್ 3 ರಂದು ಕೂಡಾ ಪುನಹಃ ಬರುವಂತೆ ತಿಳಿಸಿದ್ದು, ಆ ಪ್ರಕಾರ ಬೆಳಿಗ್ಗೆ ಕೋಟ ಠಾಣೆಗೆ ಹೋದಾಗ ಅಲ್ಲಿದ್ದ ಪೋಲಿಸ್ ಉಪನಿರೀಕ್ಷಕಿ ಸುಧಾ ಪ್ರಭು, ಸಿಬ್ಬಂದಿಗಳಾದ ರೇವತಿ ಮತ್ತು ಮತ್ತೋರ್ವ ಸಿಬ್ಬಂದಿ, ಕಿರಣ್ ಕುಮಾರ್ ಶೆಟ್ಟಿಯವರು ಜಾತಿ ನಿಂದನೆ ಮಾಡಿ ಸುಜಾತ ಇವರನ್ನು ಕಿರಣ್ ಕುಮಾರ್ ಶೆಟ್ಟಿ ಯವರು ಬಲವಂತವಾಗಿ ಮನೆಗೆ ಕರೆದುಕೊಂಡು ಹೋಗಿ, ನನ್ನ ಮೇಲೆ ಕೈಗಳಿಂದ ಕೆನ್ನೆಗೆ ಹೊಡೆದಿದ್ದಾರೆ ಮತ್ತು ಕೋಲಿನಿಂದ ನನ್ನನ್ನು ನೆಲಕ್ಕೆ ಮಲಗಿಸಿ ನನ್ನ ಎರಡೂ ಪದಗಳಿಗೆ ಹೊಡೆದು ಕಾಲಿನಿಂದ ನನ್ನ ಹೊಟ್ಟೆಗೆ ತುಳಿದಿದ್ದಾರೆ. ಅದೇ ದಿನ ಸಂಜೆ ನನ್ನನ್ನು ಠಾಣೆಯಿಂದ ಹೊರೆಗೆ ಕಳುಹಿಸುವ ಪೂರ್ವದಲ್ಲಿ ಮೊಬೈಲ್ನಲ್ಲಿ ಪೊಲೀಸರು ನನಗೆ ಯಾವುದೇ ಕಿರುಕುಳವನ್ನು ನೀಡಿಲ್ಲ ಎಂದು ಹೇಳುವಂತೆ ಒತ್ತಾಯಿಸಿ ವೀಡಿಯೋ ಮಾಡಿ ಠಾಣೆಯಲ್ಲಿ ನಡೆದದನ್ನು ಯಾರಿಗಾದರೂ ಹೇಳಿದರೆ ಸುಳ್ಳು ಪ್ರಕರಣವನ್ನು ದಾಖಲಿ ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಸಿರುವುದಾಗಿ ಸಂತ್ರಸ್ತೆ ಆಶಾ ಜಿ ಇವರು ಉಡುಪಿ ಪೊಲೀಸ್ ವರಿಷ್ಟಾಧಿಕಾರಿಯವರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.