ಬೈಂದೂರು,ಏ 13(MSP): ಭ್ರಷ್ಟಾಚಾರ ನಿರ್ಮೂಲನೆ ಮತ್ತು ದೇಶದ ಸುಭದ್ರತೆಗಾಗಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮೊತ್ತೊಮ್ಮೆ ಆಡಳಿತ ನಡೆಸಬೇಕು ಎಂದು ದೇಶದ ಮತದಾರರು ದೃಢ ನಿರ್ಧಾರ ಮಾಡಿದ್ದಾರೆ. ಅದರ ಫಲವಾಗಿ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 300ಸ್ಥಾನಗಳನ್ನು ಗಳಿಸಿ ಬಿಜೆಪಿ ಮರಳಿ ಅಧಿಕಾರಕ್ಕೆ ಬರಲಿದೆ ಎಂದು ಸೊರಬ ಕ್ಷೇತ್ರದ ಶಾಸಕ ಕುಮಾರ ಬಂಗಾರಪ್ಪ ಭರವಸೆ ವ್ಯಕ್ತಪಡಿಸಿದರು.
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಬಾರಿಯ ಚುನಾವಣೆಯು ರಾಷ್ಟ್ರೀಯ ಭದ್ರತೆ, ಏಕತೆ ಮತ್ತು ಅಭಿವೃದ್ಧಿ ವಿಚಾರಗಳನ್ನು ಆಧರಿಸಿ ನಡೆಯಲಿದೆ. ಹಿಂದಿನ ಸರ್ಕಾರಗಳ ಅಡಿಯಲ್ಲಿ ದೇಶದ ಜನರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಮೋದಿ ಸರ್ಕಾರ ಅದನ್ನು ತುಂಬಿ ಕೊಡಲಿದೆ ಎಂಬ ನಿರೀಕ್ಷೆ ಎಲ್ಲ ವರ್ಗದ ಜನರಲ್ಲಿದೆ. ಈ ಬಾರಿಯ ಕೇಂದ್ರದ ಬಜೆಟ್, ಪಕ್ಷದ ಚುನಾವಣಾ ಪ್ರಣಾಳಿಕೆ ಜನರಲ್ಲಿ ಅಂತಹ ಭರವಸೆ ಮೂಡಿಸಿದೆ ಎಂದು ಅವರು ಹೇಳಿದರು.
ಬಿಜೆಪಿಯ ವಿರುದ್ಧ ವಿವಿಧ ಪಕ್ಷಗಳು ಸೇರಿ ಈಗ ಮಾಡಿಕೊಂಡಿರುವ ಮಹಾ ಘಟಬಂಧನ್ ಬಿಜೆಪಿಯೇತರ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ತಿತ್ವ ಕಳೆದುಕೊಂಡು ದೇಶದಲ್ಲಿ ದ್ವಿಪಕ್ಷೀಯ ಪದ್ಧತಿ ನೆಲೆಯೂರುವ ಎಲ್ಲ ಸಾಧ್ಯತೆಗಳನ್ನು ಮುನ್ನೆಲೆಗೆ ತಂದಿದೆ. ಮುಂದಿನ ದಿನಗಳಲ್ಲಿ ಲೋಕಸಭೆ ಮತ್ತು ವಿಧಾನ ಸಭೆಗಳಿಗೆ ಏಕ ಕಾಲದಲ್ಲಿ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಕೆಲವೇ ಸ್ಥಾನ ಗಳಿಸಿದ ಜೆಡಿಎಸ್ ಪಕ್ಷವು ಅಧಿಕ ಸ್ಥಾನ ಗಳಿಸಿದ ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಆಡಳಿತ ನಡೆಸುವಂತಹ ವಿದ್ಯಮಾನ ಕಾಂಗ್ರೆಸ್ ನಶಿಸುವುದಕ್ಕೆ ಕಾರಣವಾಗಲಿದೆ. ಅದರ ಕಾರ್ಯಕರ್ತರು ಇಷ್ಟರಲ್ಲೇ ಭ್ರಮನಿರಸನ ಹೊಂದಿದ್ದಾರೆ. ಕಾಂಗ್ರೆಸ್ ನಾಯಕರಾದ ಸಿದ್ಧರಾಮಯ್ಯ, ಸಿ. ಎಂ. ಇಬ್ರಾಹಿಂನಂತವರು ಆಡುವ ಮಾತುಗಳು ಅವರನ್ನು ಗೊಂದಲದಲ್ಲಿ ಕೆಡಹಿವೆ. ಕೆಲವೆಡೆ ಕಾಂಗ್ರೆಸ್ ನಾಯಕರು ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸುತ್ತಿರುವ ಬಂಡಾಯ ಅಭ್ಯರ್ಥಿಗಳಿಗೆ ಬೆಂಬಲ ನೀಡುತ್ತಿದ್ದಾರೆ. ಇವೆಲ್ಲ ಕಾರಣಗಳಿಂದ ಕಾರ್ಯಕರ್ತರು ಮೂಲೆಗುಂಪಾಗುತ್ತಿದ್ದಾರೆ. ಈಗ ವೈರಲ್ ಆಗಿರುವ ’ಎಲ್ಲಿದ್ದಿಯ ನಿಖಿಲ್’ ಮಾತಿನ ಜಾಗದಲ್ಲಿ ’ಎಲ್ಲಿದ್ದೀಯಾ ಕಾಂಗ್ರೆಸ್’ ಎನ್ನುವ ಮಾತು ಚಾಲ್ತಿಗೆ ಬರಲಿದೆ. ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಸ್ತಿತ್ವಕ್ಕಾಗಿ ಬಿಜೆಪಿ ಬೆಂಬಲಿಸುವ ಅನಿವಾರ್ಯತೆಗೆ ಸಿಲುಕಲಿದ್ದಾರೆ ಎಂದರು.
ರಾಜ್ಯಗಳ ಬಿಜೆಪಿಯೇತರ ಸರ್ಕಾರಗಳಿಗೆ ಕೇಂದ್ರದ ಮೋದಿ ಸರ್ಕಾರ ದೇಶದ ಸರ್ಕಾರ ಎಂಬ ಭಾವನೆಗೆ ಬದಲಾಗಿ ತಮ್ಮ ವಿರೋಧಿ ಸರ್ಕಾರ ಎಂಬ ಭಾವನೆ ಇದೆ. ಕೇಂದ್ರ ಸರ್ಕಾರ ಜನರಿಗಾಗಿ ರೂಪಿಸಿದ ಹಲವು ಯೋಜನೆಗಳನ್ನು ಅವು ಸಮರ್ಪಕವಾಗಿ ಅನುಷ್ಠಾನಿಸುತ್ತಿಲ್ಲ ಎಂದು ಅವರು ದೂರಿದರು.
ಶಿವಮೊಗ್ಗ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿರುವ ತಮ್ಮ ಸಹೋದರ ಮಧು ಬಂಗಾರಪ್ಪ ಇಲ್ಲಿ ಪೂರ್ಣ ಮನಸ್ಸಿನಿಂದ ಸ್ಪರ್ಧಿಸುತ್ತಿಲ್ಲ. ಕಳೆದಚುನಾವಣೆಯ ಸೋಲಿನ ಬಳಿಕ ಉತ್ಸಾಹ ಕಳೆದುಕೊಂಡ ಅವರು ವಿದೇಶಕ್ಕೆ ಹೋದರು. ಅವರನ್ನು ಒತ್ತಾಯಪೂರ್ವಕ ಕರೆಸಿಕೊಂಡು ಸ್ಪರ್ಧಿಸುವಂತೆ ಮಾಡಲಾಗಿದೆ. ಈ ಚುನಾವಣೆಯಲ್ಲೂ ಸೋತು ಇನ್ನೊಮ್ಮೆ ವಿದೇಶಕ್ಕೆ ಹೋಗುವುದು ಖಚಿತ ಎಂದು ವ್ಯಂಗ್ಯವಾಡಿದರು.
ಸಿನಿಮಾ ಕಲಾವಿದರಿಗೆ ರಾಜಕೀಯ ಸಲ್ಲದು ಎಂದು ಆರಂಭದಲ್ಲಿ ಹೇಳಿಕೆ ನೀಡಿದ್ದ ತಮ್ಮ ಭಾವ ನಟ ಶಿವರಾಜಕುಮಾರ್ ಈಗ ’ಕವಚ’ ಚಲನಚಿತ್ರದ ಬಿಡುಗಡೆಯ ನೆಪದಲ್ಲಿ ಶಿವಮೊಗ್ಗ ಕ್ಷೇತ್ರದ ವಿವಿಧೆಡೆಗೆ ಹೋಗುತ್ತಿದ್ದಾರೆ. ಅವರು ಈ ನಾಟಕ ನಿಲ್ಲಿಸಿ ಕವಚ ಕಳಚಿಟ್ಟು ಮಧು ಪರ ಪ್ರಚಾರ ಮಾಡಲಿ ಎಂದು ಚುಚ್ಚಿದರು.
ಶಿವಮೊಗ್ಗ ಕ್ಷೇತ್ರದಲ್ಲಿ, ಅದರ ಭಾಗವಾದ ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಹಿಂದಿನ ಸಂಸದ ಬಿ. ಎಸ್. ಯಡಿಯೂರಪ್ಪ ಬಹಳ ಕೆಲಸ ಮಾಡಿದ್ದಾರೆ. ಉಪ ಚುನಾವಣಯಲ್ಲಿ ಗೆದ್ದ ಬಿ. ವೈ. ರಾಘವೇಂದ್ರ ತಮಗೆ ದೊರೆತ ಕೆಲವೇ ತಿಂಗಳ ಅವಧಿಯಲ್ಲಿ ಮಹತ್ವದ ಯೋಜನೆಗಳನ್ನು ತಂದಿದ್ದಾರೆ. ಇದನ್ನು ಅರಿತಿರುವ ಇಲ್ಲಿನ ಮತದಾರರು ಅವರನ್ನು ಕಳೆದ ಬಾರಿಗಿಂತ ಅಧಿಕ ಮತಗಳಿಂದ ಗೆಲ್ಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಪಕ್ಷದ ಪ್ರಮುಖರಾದ ಸುರೇಶ ಬಟವಾಡಿ, ಪುಷ್ಪರಾಜ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಸದಾಶಿವ ಪಡುವರಿ, ಪ್ರವೀಣ್ ಗುರ್ಮೆ, ರಾಜಾರಾಮ ಭಟ್, ಪ್ರಿಯದರ್ಶಿನಿ, ಶರತ್ಕುಮಾರ ಶೆಟ್ಟಿ ಇದ್ದರು.
ಬೈಂದೂರಿನಲ್ಲಿ ಬಿಜೆಪಿಯಿಂದ ರೋಡ್ ಶೋ
ಎ.23ಕ್ಕೆ ನಡೆಯಲಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಬೈಂದೂರಿನಲ್ಲಿ ರೋಡ್ ಶೋ ನಡೆಯಿತು. ಶಾಸಕರಾದ ಕುಮಾರ ಬಂಗಾರಪ್ಪ ಹಾಗೂ ಬಿ.ಎಂ.ಸುಕುಮಾರ ಶೆಟ್ಟಿ ಅವರ ನೇತೃತ್ವದಲ್ಲಿ ಬೈಂದೂರು ಸೇನೇಶ್ವರ ದೇವಸ್ಥಾನದಿಂದ ರಾಷ್ಟ್ರೀಯ ಹೆದ್ದಾರಿಯ ತನಕ ಬೃಹತ್ ರೋಡ್ ಶೋ ನಡೆಯಿತು.
ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರನ್ನು ಅತ್ಯಂತ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕಾಗಿದೆ. ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಕೇಂದ್ರದಲ್ಲಿ ಬರಲು ಪ್ರತೀಯೊಬ್ಬರು ಶ್ರಮಿಸಬೇಕು. ದೇಶದ ಸುರಕ್ಷತೆ, ರಕ್ಷಣೆ ವಿಚಾರದಲ್ಲಿ ಮೋದಿ ನೇತೃತ್ವದ ಸರ್ಕಾರದಿಂದ ಮಾತ್ರ ಸಾಧ್ಯ. ಆ ಹಿನ್ನಲೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಶಕ್ತಿಯಾಗಿರುವ ಕಾರ್ಯಕರ್ತರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಬೈಂದೂರು ಮಂಡಲದ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಪ್ರಧಾನಕಾರ್ಯದರ್ಶಿ ದೀಪಕ ಕುಮಾರ್ ಶೆಟ್ಟಿ, ಯುವ ಮೋರ್ಚಾದ ಅಧಯಕ್ಷ ಶರತ್ ಕುಮಾರ್ ಶೆಟ್ಟಿ, ಮಹಿಳಾ ಮೋರ್ಚಾದ ಅಧ್ಯಕ್ಷೆ ಪ್ರಿಯದರ್ಶಿನಿ, ಸದಾಶಿವ ಪಡುವರಿ ಮೊದಲಾದವರು ಉಪಸ್ತಿತರಿದ್ದರು.