ಮಂಗಳೂರು, 05 (DaijiworldNews/AK): ಉತ್ತರ ಪ್ರದೇಶದಿಂದ ವಿಮಾನದಲ್ಲಿ ಆಗಮಿಸಿ ಮಂಗಳೂರಿನಲ್ಲಿ ರೈಲು ಪ್ರಯಾಣಿಕರ ಚಿನ್ನಾಭರಣಗಳನ್ನು ಕದಿಯುತ್ತಿದ್ದ ಕಳ್ಳರಿಬ್ಬರನ್ನು ರೈಲ್ವೇ ಪೊಲೀಸರು ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ.
ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಅಭಯರಾಜ್ ಸಿಂಗ್ (26) ಹಾಗೂ ರಾಜ್ ಪುರದ ಹರಿಶಂಕರ್ (25) ಬಂಧಿತ ಆರೋಪಿಗಳು. ಒಬ್ಬ ಆರೋಪಿ ಪರಾರಿಯಾಗಿದ್ದಾನೆ.
ಸೆಪ್ಟೆಂಬರ್ 28ರಂದು ಮಂಗಳೂರು ಮತ್ತು ಸುರತ್ಕಲ್ ನಡುವೆ ಸಂಚರಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕರ ಚಿನ್ನಾಭರಣ ಕಳವು ಮಾಡಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು.
ರೈಲಿನಲ್ಲಿದ್ದ ಇಬ್ಬರು ಯುವಕರ ಬಗ್ಗೆ ಸಂಶಯಗೊಂಡ ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸುವಾಗ ಕಳ್ಳತನ ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದಾರೆ.
ಆರೋಪಿಗಳನ್ನು ವಶಕ್ಕೆ ಪಡೆದ ಆರ್ ಪಿಎಫ್ ತಂಡ ರೈಲ್ವೇ ಪೊಲೀಸರಿಗೆ ಒಪ್ಪಿಸಿದ್ದಾರೆ.
ತನಿಖೆ ವೇಳೆ ಆರೋಪಿಗಳು ಉತ್ತರಪ್ರದೇಶದಿಂದ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿ ರಾತ್ರಿ ವೇಳೆ ಸಂಚರಿಸುವ ರೈಲನ್ನು ಟಾರ್ಗೆಟ್ ಮಾಡಿ ಪ್ರಯಾಣ ಮಾಡುತ್ತಿದ್ದರು. ರಾತ್ರಿ ಮಲಗಿರುತ್ತಿದ್ದ ವೃದ್ಧ ಹಾಗೂ ಮಹಿಳಾ ಪ್ರಯಾಣಿಕರ ಚಿನ್ನಾಭರಣಗಳನ್ನು ದೋಚಲು ಸ್ಕೇಚ್ ಹಾಕುತ್ತಿದ್ದರು. ರಾತ್ರಿ ವೇಳೆ ರೈಲಿನ ವೇಗ ಕಡಿಮೆಯಾಗುತ್ತಿದ್ದಂತೆ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗುತ್ತಿದ್ದರು.
ಆರೋಪಿಗಳು ಪಾಲಕ್ಕಾಡ್, ತಿರುವನಂತಪುರಂ ಹಾಗೂ ಮಂಗಳೂರು - ಮುಂಬೈ ನಡುವಿನ ಕೊಂಕಣ ರೈಲಿನಲ್ಲಿ ಹೆಚ್ಚು ಕಳವು ಮಾಡುತ್ತಿದ್ದರು. ರೈಲು ಪ್ರಯಾಣಿಕರಿಂದ ಕದ್ದು ಇರಿಸಿಕೊಂಡಿದ್ದ 125 ಗ್ರಾಂ ಚಿನ್ನಾಭರಣಗಳನ್ನು ರೈಲ್ವೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.