ಕಾಸರಗೋಡು, ಅ 04 (DaijiworldNews/HR): ಕೊಲೆ ಪ್ರಕರಣದ ಆರೋಪಿಯೋರ್ವನ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈದು ಮೃತ ದೇಹವನ್ನು ಪೊದೆಗೆ ಎಸೆದ ಘಟನೆಗೆ ಸಂಬಂಧಪಟ್ಟಂತೆ ಓರ್ವನನ್ನು ಕುಂಬಳೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕುಂಬಳೆ ಶಾಂತಿಪಳ್ಳದ ಅಬ್ದುಲ್ ರಶೀದ್ (42)ನ ಕೊಲೆ ಆರೋಪಿ, ಅಭಿಲಾಷ್ ಯಾನೆ ಹಬೀಬ್ (34 ) ಬಂಧಿತ ಆರೋಪಿ.
ರಶೀದ್ ನ ಸ್ನೇಹಿತನಾಗಿದ್ದ ಅಭಿಲಾಷ್ ನಡುವಿನ ವೈಷಮ್ಯ ಕೊಲೆಗೆ ಕಾರಣ ಎಂದು ಪೊಲೀಸರಿಗೆ ಮಾಹಿತಿ ಲಭಿಸಿದೆ. 2019 ರ ಅಕ್ಟೋಬರ್ 18 ರಂದು ಉಳಿಯತ್ತಡ್ಕದ ಶಾನ್ ವಾಸ್ ನನ್ನು ಕೊಲೆಗೈದು ಬಾವಿಗೆಸದ ಪ್ರಕರಣದ ಆರೋಪಿಯಾಗಿದ್ದ ರಶೀದ್ ನ ಮೃತದೇಹ ಸೋಮವಾರ ಬೆಳಿಗ್ಗೆ ಕುಂಬಳೆ ಕುಂಟಗೇರಡ್ಕದ ಮೈದಾನ ಪರಿಸರದ ಪೊದೆಯಲ್ಲಿ ಪತ್ತೆಯಾಗಿತ್ತು.
ರವಿವಾರ ರಾತ್ರಿ ಪಾನಮತ್ತರಾಗಿದ್ದ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಈ ಸಂದರ್ಭದಲ್ಲಿ ನೆಲಕ್ಕೆ ಬಿದ್ದ ರಶೀದ್ ನ ತಲೆಗೆ ಕಲ್ಲಿನಿಂದ ಬಡಿದು ಕೊಲೆಗೈದಿರುವುದಾಗಿ ಬಳಿಕ ಮೃತದೇಹವನ್ನು ಪೊದೆಗೆ ಎಸೆದಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ.
ಕಾಸರಗೋಡಿನ ಶಾನ್ ವಾಸ್ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದು, ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ರಶೀದ್ ಕುಂಬಳೆ ಮಾವಿನಕಟ್ಟೆಯ ಕ್ವಾಟರ್ಸ್ ನಲ್ಲಿ ವಾಸ್ತವ್ಯ ಹೂಡಿ ಸಾರಣೆ ಕೆಲಸ ನಿರ್ವಹಿಸುತ್ತಿದ್ದು ಈ ಸಂದರ್ಭದಲ್ಲಿ ಅಭಿಲಾಷ್ ನ ಜೊತೆ ಸ್ನೇಹ ಬೆಳೆಸಿದ್ದನು. ಕೃತ್ಯ ನಡೆದ ದಿನ ಇಬ್ಬರು ಬೈಕ್ ನಲ್ಲಿ ತೆರಳಿದ್ದು, ಈ ಬಗ್ಗೆ ಪ್ರತ್ಯಕ್ಷದರ್ಶಿಗಳಿಂದ ಪೊಲೀಸರಿಗೆ ಮಾಹಿತಿ ಲಭಿಸಿತ್ತು.
ಇನ್ನು ಕೃತ್ಯದ ಬಳಿಕ ಅಭಿಲಾಷ್ ತಲೆ ಮರೆಸಿಕೊಂಡಿದ್ದನು. ಇದರಿಂದ ಈತನ ಬಗ್ಗೆ ಪೊಲೀಸರಿಗೆ ಸಂಶಯ ಉಂಟಾಗಿದ್ದು ತನಿಖೆ ನಡೆಸಿದ್ದ ಪೊಲೀಸರು ಪೆರುವಾಡ್ ನ ಜನವಾಸ ಇಲ್ಲದ ಮನೆಯಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಕೃತ್ಯದಲ್ಲಿ ಅಭಿಲಾಷ್ ಜೊತೆ ಬೇರೆ ಯಾರಾದರೂ ಶಾಮೀಲಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.