ಉಡುಪಿ, ಅ 04 (DaijiworldNews/HR): ಮಹಿಷ ಮಂಡಳವನ್ನಾಳಿದ ದ್ರಾವಿಡರ ದೊರೆ ಮಹಿಷಾಸುರ ಮಹಾರಾಜರ ಬಗ್ಗೆ ಜನತೆಗೆ ಅರಿವಿನ ಜಾಗೃತಿ ಮೂಡಿಸುವ ಉದ್ದೇಶದಿಂದ ಅಕ್ಟೋಬರ್ 15ರಂದು ಉಡುಪಿಯಲ್ಲಿ ಮಹಿಷ ದಸರಾ ಮತ್ತು ಮೂಲ ನಿವಾಸಿಗಳ ಸಾಂಸ್ಕೃತಿಕ ಹಬ್ಬ ಆಚರಿಸುದಾಗಿ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಪೂರ್ವಾಗ್ರಹ ಪೀಡಿತ ಹಿಂದೂ ಧರ್ಮಾಂಧರು ಮಹಿಷಾಸುರ ಒಬ್ಬ ದುಷ್ಟ, ನೀಚ, ಪ್ರಜಾಕಂಟಕ ನರಭಕ್ಷಕ ಇತ್ಯಾದಿಯಾಗಿ ಆತನನ್ನು ಒಬ್ಬ ವಿಲನ್ ಆಗಿ ಬಂಬಿಸಿದ್ದಾರೆ. ಆದರೆ ಮಹಿಷಾಸುರ ಈ ದೇಶದ ಅಸುರ ಸಾಮ್ರಾಜ್ಯದ ನಾಯಕರಲ್ಲಿ ಅಗ್ರಗಣ್ಯನಾದವ.ಆರ್ಯ ಮತ್ತು ಬುದ್ಧಪೂರ್ವ ಪ್ರಾಗೈತಿಹಾಸಿಕ ಯುಗದ ಚಕ್ರೇಶ್ವರ ಮತ್ತು ಮೈಸೂರಿನ ಹುಟ್ಟಿಗೆ ಕಾರಣನಾದವ, ಪ್ರಾಚೀನ ಮಹಿಷಾಮಂಡಲದ ದೊರೆಯಾಗಿದ್ದ. ಸಾಮ್ರಾಟ್ ಅಶೋಕ ಚಕ್ರವರ್ತಿಯು ಯುದ್ಧದಿಂದಾದ ಸಾವುನೋವು ಮನಪರಿವರ್ತನೆಯಾಗಿ ಶಸ್ತ್ರವನ್ನು ತ್ಯಜಿಸಿ ಇನ್ನು ಮುಂದೆ ಯುದ್ಧ ಮಾಡುವುದಿಲ್ಲವೆಂದು ಶಪಥ ಮಾಡುತ್ತಾನೆ.ಒಂಬತ್ತು ದಿನ ಉಪವಾಸ ಮಾಡಿ ಬೌದ್ಧ ದಮ್ಮವನ್ನು ಸ್ವೀಕರಿಸುತ್ತಾನೆ ಆ ದಿನವನ್ನೇ ವಿಜಯ ದಶಮಿಯೆಂದು ಆಚರಿಸುತ್ತ ಬರಲಾಗುತ್ತಿತ್ತು.ಆದರೆ ಪುರೋಹಿತ ಶಾಹಿಗಳು ಅದನ್ನು ತಿರುಚಿ ಕಾಲ್ಪನಿಕ ದೇವಿಯ ಸುಳ್ಳಿನ ಕಥೆ ಕಟ್ಟಿ ದಸರಾ ಉತ್ಸವವನ್ನು ಆಚರಣೆಗೆ ತಂದರು. ಬಹುಜನರ ಭಾಗ್ಯವಿದಾತ ಬೌದ್ಧರ ನೈಜ ಇತಿಹಾಸವನ್ನು, ಮಹಿಷಾ ಪರಂಪರೆಯನ್ನು ಸುಸ್ಥಿರಗೊಳಿಸುವ ನಿಟ್ಟಿನಲ್ಲಿ ಮತ್ತು ವೈದಿಕ ಸಂಸ್ಕೃತಿಗೆ ಪರ್ಯಾಯವಾಗಿ ಪ್ರತಿಸಂಸ್ಕೃತಿ ಸೃಷ್ಟಿಸುವ ಸಲುವಾಗಿ ಅಂಬೇಡ್ಕರ್ ಯುವಸೇನೆ ಆಯೋಜಿಸಿರುವ ಮಹಿಷ ದಶರಾ ಸಾರ್ವಕಾಲಿಕ ಮಹತ್ವ ಹೊಂದಲಿದೆ ಎಂದು ತಿಳಿಸಿದರು.
ಅಕ್ಟೋಬರ್ 15 ರಂದು ಬೆಳಿಗ್ಗೆ 10:30 ಗಮಟೆಗೆ ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕದಿಂದ ವಿವಿಧ ವಾಹನಗಳ ಜಾಥಾದೊಂದಿಗೆ ಮಹಿಷ ರಾಜನ ಟ್ಯಾಬ್ಲೋ ಮೆರವಣಿಗೆ ಹೊರಟು ಜೋಡುಮಾರ್ಗವಾಗಿ ಉಡುಪಿಯ ಹೃದಯಭಾಗದಿಂದ ಬನ್ನಂಜೆ ಮೂಲಕವಾಗಿ ಆದಿ ಉಡುಪಿಯ ಜಿಲ್ಲಾ ಅಂಬೇಡ್ಕರ್ ಭವನ ತಲುಪಲಿದೆ. ಅಲ್ಲಿ ಮಹಿಷಾಸುರ ಯಾರು? ವಿಚಾರ ಸಂಕಿರಣವನ್ನು ಕಲಬುರಗಿಯ ಸಂಶೋಧನಾ ಬರಹಗಾರ ಡಾ.ವಿಠಲ ವಗ್ಗನ್ ಉದ್ಘಾಟಿಸಿ ವಿಚಾರ ಮಂಡಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಪ್ರಗತಿಪರ ಚಿಂತಕರಾದ ಶ್ರೀರಾಮ ದಿವಾಣ ಮತ್ತು ದಲಿತ ಚಿಂತಕ ನಾರಾಯಣ ಮಣೂರು ಭಾಹವಹಿಸಲಿದ್ದಾರೆ ಎಂದು ಹರೀಶ್ ಸಾಲ್ಯಾನ್ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ದಯಾನಂದ ಕಪ್ಪೆಟ್ಟು, ಲೋಕೇಶ್ ಪಡುಬಿದ್ರಿ, ಸಂಜೀವ ಬಳ್ಕೂರ್, ಗಣೇಶ್ ನೆರ್ಗಿ, ಜಯನ್ ಮಲ್ಪೆ ಉಪಸ್ಥಿತರಿದ್ದರು.