ಕಾರ್ಕಳ, ಎ13(SS): ಉಡುಪಿ ಜಿಲ್ಲೆಯಲ್ಲಿ ಮರಳು ಸಿಗದೇ ಇರುವುದಕ್ಕೆ ನೇರ ಕಾರಣ ಸಂಸದೆ ಶೋಭ ಕರಂದ್ಲಾಜೆ ಎಂದು ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಕೇಂದ್ರ ಸರಕಾರವು ಮಿನಿಸ್ಟ್ರಿ ಆಫ್ ಮೈನಿಂಗ್ ಮೂಲಕ ನಾನ್-ಸಿಆರ್ಝಡ್ನಲ್ಲಿ ಮರಳುಗಾರಿಕೆಯನ್ನು ನಿಷೇಧಿಸಿದ ಪರಿಣಾಮ ಉಡುಪಿ ಜಿಲ್ಲೆಯಲ್ಲಿ ಮರಳು ಸಿಗುತ್ತಿಲ್ಲ. ಅದಕ್ಕೆ ನೇರ ಕಾರಣ ಸಂಸದೆ ಶೋಭ ಕರಂದ್ಲಾಜೆ. ಸಂಸದರು ಈ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಉಡುಪಿ ಜಿಲ್ಲೆಯಲ್ಲಿರುವ ಮರಳುಗಾರಿಕೆಗೆ ಸಹಕರಿಸಬೇಕಿತ್ತು ಎಂದು ಹೇಳಿದರು.
ಒಂದು ವೇಳೆ ನಾನು ಸಂಸದನಾಗಿ ಆಯ್ಕೆಯಾದರೆ ಕೇಂದ್ರದ ಕನೂನಿಗೆ ತಿದ್ದುಪಡಿ ತರುವ ಮೂಲಕ ಮರಳು ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವುದಾಗಿ ಭರವಸೆ ನೀಡಿದರು.
ಸಂಸದೆ ಶೋಭಾ ಕರಂದ್ಲಾಜೆ ಮರಳು ಸಮಸ್ಯೆಯನ್ನು ಪರಿಹರಿಸುವುದು ಬಿಟ್ಟು ಜನತೆಯಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅನೇಕ ಕೂಲಿ ಕಾರ್ಮಿಕರು ಮರಳು ಸಮಸ್ಯೆಯಿಂದ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ನಾನು ಸಚಿವನಾಗಿದ್ದ ಸಂದರ್ಭ ಮರಳುಗಾರಿಕೆಗೆ 165 ಪರವಾನಿಗೆ ನೀಡಿ 28 ಬ್ಲಾಕ್ಗಳನ್ನು ಗುರುತಿಸಿದ್ದೆ. ಕಡಿಮೆ ದರದಲ್ಲಿ ಇಲ್ಲಿನ ಜನತೆಗೆ ಮರಳು ಸಿಗಬೇಕೆಂಬ ದೃಷ್ಟಿಯಿಂದ ಅನ್ಯ ರಾಜ್ಯಕ್ಕೆ ತೆರಳುವ ಮರಳನ್ನು ನಿಷೇಧಿಸಿ, 6 ಲಕ್ಷ ಟನ್ ಮರಳನ್ನು ಸ್ಥಳೀಯರಿಗೆ ಸಿಗುವಂತೆ ಅವಕಾಶ ಕಲ್ಪಿಸಿದ್ದೆ ಎಂದು ಹೇಳಿದರು.