ಮಂಗಳೂರು, ಅ 02 (DaijiworldNews/HR): ದಕ್ಷಿಣ ಕನ್ಙಡ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಭಾರತ ಸೇವಾದಳದ ಸಂಯುಕ್ತಾಶ್ರಯದಲ್ಲಿ ನಗರದ ರಾಜಾಜಿ ಪಾರ್ಕ್ ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 154ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಹಾಗೂ ಸಡಗರದಿಂದ ಆಚರಿಸಲಾಯಿತು.
ಸಂಸದರಾದ ನಳಿನ್ ಕುಮಾರ್ ಕಟೀಲ್, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್, ಮಂಗಳೂರು ಮೇಯರ್ ಸುಧೀರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ, ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ., ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ್, ಭಾರತ್ ಸೇವಾದಳದ ಬಶೀರ್ ಬೈಕಂಪಾಡಿ, ಸುಧೀರ್ ಟಿ.ಕೆ., ಮಂಜೇಗೌಡ, ಪ್ರಭಾಕರ ಶ್ರೀಯಾನ್, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಈ ವೇಳೆ ಮಾತನಾಡಿದ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಅಹಿಂಸಾ ಚಳವಳಿಯ ಮೂಲಕ ದೇಶದ ಜನರನ್ನು ಒಗ್ಗೂಡಿಸಿ, ಗುಲಾಮಗಿರಿಯಿಂದ ಹೊರತಂದ ಮಹಾತ್ಮ ಗಾಂಧಿ ಅವರ ಜೀವನವೇ ಅಧ್ಯಯನದ ಪಾಠ ಶಾಲೆ ಎಂದರು.
ಗಾಂಧಿ ಎಂದರೆ ಒಂದು ಚಿಂತನೆ, ವಿಚಾರಧಾರೆ. ದೇಶದಲ್ಲಿ ರಾಮರಾಜ್ಯದ ಕನಸು ಕಂಡಿದ್ದ ಮಹಾತ್ಮಗಾಂಧಿ ದುಶ್ಚಟಗಳಿಂದ ದೇಶವನ್ನು ಮುಕ್ತಗೊಳಿಸುವ ಆಶಯ ಹೊಂದಿದ್ದರು. ರಾಷ್ಟ್ರದ ಉನ್ನತಿಯ ಕಲ್ಪನೆಯೊಂದಿಗೆ ಸ್ವದೇಶಿ ಪರಿಕಲ್ಪನೆಗೆ ಒತ್ತು ನೀಡಿದ್ದರು. ಸ್ವಚ್ಛತೆಯ ಮೂಲಕ ಆರೋಗ್ಯಕರ ರಾಷ್ಟ್ರ ನಿರ್ಮಾಣವನ್ನು ತಮ್ಮ ನಡವಳಿಕೆ ಮೂಲಕ ಪ್ರತಿಪಾದಿಸಿದವರು ಗಾಂಧೀಜಿ. ಲಾಲ್ಬಹಾದ್ದೂರ್ ಶಾಸ್ತ್ರೀ ಅವರು ಜೈ ಜವಾನ್ ಜೈ ಕಿಸಾನ್ ಎಂದು ಹೇಳುವ ಮೂಲಕ ದೇಶದ ಆರ್ಥಿಕತೆಗೆ ಶಕ್ತಿ ತುಂಬಿದ್ದರು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಶಾಂತಿಯ ಮೂಲಕ ಚಳವಳಿ ನಡೆಸಬಹುದು ಎಂಬುದನ್ನು ತೋರಿಸಿದವರು ಗಾಂಧೀಜಿ. ಸರಳತೆ, ಸತ್ಯದ ಮಾರ್ಗದಲ್ಲಿ ಭಯದ ಅಗತ್ಯವಿಲ್ಲ ಎಂಬುದನ್ನು ತೋರಿಸಿದ್ದ ಗಾಂಧೀಜಿಯವರ ಆಶಯದಂತೆ ನಡುರಾತ್ರಿಯಲ್ಲೂ ಮಹಿಳೆ ಒಬ್ಬಂಟಿಯಾಗಿ ತಿರುಗಾಡಲು ಸಾಧ್ಯವಾಗುವ ರಾಮರಾಜ್ಯದ ಕನಸನ್ನು ನನಸಾಗಿಸಬೇಕು ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಜಿಲ್ಲಾ ಮಟ್ಟದಲ್ಲಿ ಪ್ರೌಢಶಾಲೆ, ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ನಡೆಸಲಾದ ಬಾಪೂಜಿ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸೇವಾದಳದ ಬಶೀರ್ ಬೈಕಂಪಾಡಿ ಸ್ವಾಗತಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ ಎಚ್.ಜಿ. ವಂದಿಸಿದರು. ಸೇವಾದಳದ ಮಂಜೇಗೌಡ ನಿರೂಪಿಸಿದರು.
ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.