ಉಡುಪಿ, ಅ 02 (DaijiworldNews/HR): ಪ್ರಧಾನಿ ನರೇಂದ್ರ ಮೋದಿ ಸ್ವಚ್ಚತಾ ಆಂದೋಲನ ಕರೆಕೊಟ್ಟ ಹಿನ್ನಲೆ ಉಡುಪಿಯ ನಾಗರಿಕ ಸಮಿತಿಯಿಂದ ಅಪೂರ್ಣ ಕಾಮಗಾರಿ ವಿರುದ್ದ ಪ್ರತಿಭಟಿಸಿ ತುಕ್ಕು ಹಿಡಿದ ಕಬ್ಬಿಣದ ಸರಳುಗಳನ್ನ ಸ್ವಚ್ಚಗೊಳಿಸಿ ಬಣ್ಣ ಬಳಿದು ಅಣುಕು ಕಾರ್ಯ ಸ್ವಚ್ಚತಾ ಕಾರ್ಯಕ್ರಮವು ನಡೆಯಿತು.
ಉಡುಪಿ – ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಇಂದ್ರಾಳಿಯಲ್ಲಿ ಕಳೆದ ಐದು ವರ್ಷದಿಂದ ಕಾಮಗಾರಿ ಸ್ಥಗಿತಗೊಂಡು ಅರ್ಧ ನಿರ್ಮಾಣವಾಗಿರುವ ಸೇತುವೆಯ ಸರಳುಗಳು ತುಕ್ಕು ಹಿಡಿಯಲು ಶುರು ಆಗಿದ್ದು, ಈ ಕಬ್ಬಿಣದ ಸರಳುಗಳಿಗೆ ಪೈಂಟ್ ಬಳಿದು ಅಣಕು ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಇಂದ್ರಾಳಿಯ ರೈಲ್ವೆ ಓವರ್ ಬ್ರಿಡ್ಜ್ ಕಾಮಗಾರಿ ಸ್ಥಗಿತಗೊಂಡ ಪರಿಣಾಮ ಸಲಕರಣೆಗಳು ತುಕ್ಕುಹಿಡಿದಿದ್ದು, ಇಲ್ಲಿನ ಅಪೂರ್ಣ ಕಾಮಗಾರಿಯಿಂದಾಗಿ ಈ ಬಾಗದಲ್ಲಿ ಹೆಚ್ಚಿನ ಅಪಘಾತಗಳು ಕೂಡಾ ನಡೆಯುತ್ತಿವೆ. ಪ್ರಸ್ತುತ ಇಂದ್ರಾಳಿ ರೈಲ್ವೇ ಬ್ರಿಡ್ಜ್ ನ ಗರ್ಡರ್ ನಿರ್ಮಾಣ ಕಾಮಗಾರಿಯು ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದು ಡಿಸೆಂಬರ್ ಒಳಗಾಗಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಅಳವಡಿಕೆ ಕಾರ್ಯ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ.
ಇಲ್ಲಿನ ಸಮಸ್ಯೆಯ ಕುರಿತು ಮನವಿ ಸಲ್ಲಿಸಿ ಬೇಸತ್ತ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ವಿಭಿನ್ನ ಅಣುಕು ಕಾರ್ಯ ನಡೆಸಿ ಕೇಂದ್ರ ಸರ್ಕಾರ ಈ ಮಹತ್ವದ ದಿನವಾದರೂ ಈ ರೀತಿಯ ಅಣುಕು ಸ್ಚಚ್ಚತೆ ಗಮನಿಸಿ ಕಾಮಗಾರಿಗೆ ಚುರುಕು ಮುಟ್ಟಿಸಲು ಮನವಿ ಮಾಡಿದ್ದಾರೆ.